ನಾಪೋಕ್ಲು ಡಿ.14 NEWS DESK : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಮುನ್ನಾ ದಿನ ವಾರ್ಷಿಕ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ತಕ್ಕ ಮುಖ್ಯಸ್ಥರು, ಊರಿನ ಪರವೂರಿನ ಭಕ್ತರು ಸೇರಿ ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟವನ್ನು ಒಪ್ಪಿಸಲಾಯಿತು. ನಂತರ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು, ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ತೀರ್ಥ, ಪ್ರಸಾದ, ಅನ್ನಸಂತರ್ಪಣೆ ನೆರವೇರಿತು. ದೇವರ ನಡೆಯಲ್ಲಿ ನಿಂತು ತಕ್ಕ ಮುಖ್ಯಸ್ಥರು ನಾಡಿನ ಸುಭಿಕ್ಷಗಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವರ ಪ್ರದರ್ಶನ, ಬಲಿ ನಡೆದಯ ಎತ್ತುಪೋರಾಟ ದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತಾದಿಗಳು ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ತೆರಳಿದರು. ಈ ಸಂದರ್ಭ ಪೇರೂರು ಹಾಗೂ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ಧಕಲಶ ಪೂಜಾಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು. ಬಳಿಕ ಎತ್ತುಪೋರಾಟದ ಅಕ್ಕಿಯನ್ನು ಮೂರು ಭಾಗಮಾಡಿ ನೆಲಜಿ, ಪೇರೂರು ಹಾಗೂ ಪಾಡಿ ದೇವಾಲಯದ ತಕ್ಕಮುಖ್ಯಸ್ಥರು ಹಂಚಿಕೊಂಡು ದೇವರ ಕಟ್ಟು ಸಡಿಲಿಸಿ ನಾಡಿನ ಸುಭಿಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ಸಂಭ್ರಮಂದ ಜರುಗಿತು. ಈ ಸಂದರ್ಭ ನಾಡಿನ ಮತ್ತು ದೇವಾಲಯದ 13 ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘ ಸೇರಿದಂತೆ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಊರಿನ ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿಯೂ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ಜರುಗಿತು. ಹಬ್ಬದ ಪ್ರಯುಕ್ತ ಎತ್ತುಪೋರಾಟ, ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದ ಬಳಿಕ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ನೆರವೇರಿತು.
ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಡಿ.14 (ಇಂದು) ರಾತ್ರಿ 7.30 ಗಂಟೆಗೆ ನೆರೆ ಕಟ್ಟುವುದು, 8.30 ಗಂಟೆಗೆ ಕದಿರು ಕೊಯ್ಯುವುದು ಮತ್ತು 9.30 ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಗಳಿಗೆಯಾಗಿರುವುದನ್ನು ನಿರ್ಧರಿಸಲಾಗಿದೆ. ಬಳಿಕ ನಾಡಿನೆಲ್ಲೆಡೆ ರಾತ್ರಿ 7.50 ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ಕೊಯ್ಯುವುದು ಮತ್ತು 9.50 ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಪುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
ವರದಿ: ದುಗ್ಗಳ ಸದಾನಂದ.