ಕುಶಾಲನಗರ, NEWS DESK ಸೆ.8: ಕುಶಾಲನಗರದ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಪವಿತ್ರ ಕನ್ಯಾಮರಿಯಮ್ಮನ ಜನ್ಮ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ವಿಶೇಷ ನೊವೇನಾ ಪ್ರಾರ್ಥನೆಗಳು ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪವಿತ್ರ ಕನ್ಯಾಮರಿಯಮ್ಮನ ಮಧ್ಯಸ್ಥಿಕೆಯನ್ನು ಕೋರಿ ಪ್ರಾರ್ಥಿಸಿದರು.
ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ವಂ. ಫಾ. ಜ್ಞಾನ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರು ಧರ್ಮಪ್ರಾಂತ್ಯದ ವಂ. ಫಾ. ಆಂಥೋನಿ ಕುಮಾರ್ ಹಾಗೂ ವಂ. ಫಾ. ನವೀನ್ ಕುಮಾರ್ ಉಪಸ್ಥಿತರಿದ್ದರು. ತಪೋವನದ ಧರ್ಮಗುರುಗಳೂ ಆಚರಣೆಯಲ್ಲಿ ಪಾಲ್ಗೊಂಡರು.
ವಂ. ಫಾ. ನವೀನ್ ಕುಮಾರ್ ಅವರಿಂದ ಪವಿತ್ರ ಬಲಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ಪವಿತ್ರ ಕನ್ಯಾಮರಿಯಮ್ಮನ ಆಶೀರ್ವಾದವನ್ನು ಕೋರಿದರು.
ಧಾರ್ಮಿಕ ಕಾರ್ಯಕ್ರಮದ ಬಳಿಕ ಕೇಕ್ ಕತ್ತರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ನಂತರ ಸೌಹಾರ್ದತೆಯ ಉಪಹಾರ ಕೂಟ ಆಯೋಜಿಸಲಾಗಿದ್ದು, ಧರ್ಮಗುರುಗಳು ಹಾಗೂ ಭಕ್ತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಪಾಲ್ಗೊಂಡರು.
ಪ್ರಾರ್ಥನೆ, ಭಕ್ತಿ, ಸೌಹಾರ್ದತೆ ಹಾಗೂ ಸಂತೋಷದಿಂದ ಕೂಡಿದ ಆಚರಣೆಯು ಸಂತ ಸೆಬಾಸ್ಟಿಯನ್ ಚರ್ಚ್‌ನ ಕ್ರೈಸ್ತ ಸಮುದಾಯಕ್ಕೆ ವಿಶೇಷ ಆಧ್ಯಾತ್ಮಿಕ ಅನುಭವವನ್ನು ನೀಡಿತು.







