ಮಡಿಕೇರಿ ಡಿ.17 NEWS DESK : ಸಂಪೂರ್ಣವಾಗಿ ಹದಗೆಟ್ಟಿರುವ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ರಸ್ತೆಯನ್ನು ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಿ ಡಿ.18 ರಂದು ಗಾಳಿಬೀಡು, ಕಾಲೂರು, ವಣಚಲು, ಕೂಟುಹೊಳೆ, ಕೆ.ನಿಡುಗಣೆ ಹಾಗೂ ಹೆಬ್ಬೆಟ್ಟಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಗಾಳಿಬೀಡು ಗ್ರಾಮದ ಪ್ರಮುಖ ಪಾಂಡೀರ ಸುಬ್ರಮಣಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ 10ಗಂಟೆಗೆ ಮೂರನೇ ಮೈಲು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಗಾಳಿಬೀಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಳೆದ ಹಲವು ವರ್ಷಗಳಿಂದ ಡಾಂಬರೀಕರಣವಾಗಿಲ್ಲ. ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾತ್ರ ನಡೆಯುತ್ತಿದೆ. ಈಗಲೂ ತೇಪೆ ಹಾಕುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಹದಗೆಟ್ಟ ರಸ್ತೆ ಕಾಲೂರು, ವಣಚಲು, ಕೂಟುಹೊಳೆ, ಕೆ.ನಿಡುಗಣೆ, ಹೆಬ್ಬೆಟ್ಟಗೇರಿ, ಪ್ರಾಕೃತಿಕ ವಿಕೋಪದ ನೆರೆ ಸಂತ್ರಸ್ಥರ ಮನೆಗಳಿಗೆ ಹಾಗೂ ಮಡಿಕೇರಿ ನಗರವನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈ ಭಾಗದಲ್ಲೇ ಜನಪ್ರಿಯ ಪ್ರವಾಸಿತಾಣ ಮಾಂದಲ್ ಪಟ್ಟಿ ಮತ್ತು ಹಲವು ಪ್ರತಿಷ್ಠಿತ ರೆಸಾರ್ಟ್‍ಗಳಿವೆ. ನಿತ್ಯ ಸಾವಿರಾರು ವಾಹನಗಳ ಸಂಚಾರವಿದ್ದರೂ ಹಾಗೂ ಪ್ರವಾಸೋದ್ಯಮದ ಮೂಲಕ ಸರ್ಕಾರಕ್ಕೆ ಹೆಚ್ಚು ಆದಾಯ ಸಂದಾಯವಾಗುತ್ತಿದ್ದರೂ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಶಾಸಕರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರೂ ಇಲ್ಲಿಯವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಂಡ, ಗುಂಡಿಗಳಲ್ಲಿ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದ್ದರೂ ತೇಪೆ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ ಮತ್ತು ಇದನ್ನು ಈ ಭಾಗದ ಎಲ್ಲಾ ಗ್ರಾಮಸ್ಥರು ವಿರೋಧಿಸುತ್ತೇವೆ. ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಬೇಕು ಮತ್ತು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿ.18 ರಂದು ನಡೆಯುವ ಪ್ರತಿಭಟನೆಯಲ್ಲಿ ಗಾಳಿಬೀಡು, ಕಾಲೂರು, ವಣಚಲು, ಕೂಟುಹೊಳೆ, ಕೆ.ನಿಡುಗಣೆ, ಹೆಬ್ಬೆಟ್ಟಗೇರಿ ಗ್ರಾಮಸ್ಥರು ಭಾಗಿಯಾಗಲಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಮತ್ತೋರ್ವ ಗ್ರಾಮಸ್ಥ ಹರೀಶ ರೈ ಮಾತನಾಡಿ, ಗಾಳಿಬೀಡು ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಕ್ಲಬ್ ಮಹೀಂದ್ರದಿಂದ ವಣಚಲು ವರೆಗೆ ಸುಮಾರು 15 ಕಿ.ಮೀ ವರೆಗಿನ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಶಿವಪ್ರಸಾದ್ ರೈ, ನವೀನ್ ದೇರಳ, ಯು.ಎಸ್.ಗಿರೀಶ್ ಹಾಗೂ ಯಾಲದಾಳು ರಾಜಶೇಖರ ಉಪಸ್ಥಿತರಿದ್ದರು.