ನಾಪೋಕ್ಲು ಡಿ.18 NEWS DESK : ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ನಾಲ್ಕುನಾಡು ವ್ಯಾಪ್ತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ವಿವಿಧ ದೇವಾಲಯ, ಐನ್ ಮನೆ, ಕೊಡವ ಸಮಾಜಗಳಲ್ಲಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ನಾಡಿನಲ್ಲೆಡೆ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು. ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಅಮ್ಮಂಗೇರಿಯ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿಬೊಳಕ್ ಹಿಡಿದು ದೇವಾಲಯಕ್ಕೆ ಪ್ರದಕ್ಷಣೆ ಮಾಡಿ ಆಗಮಿಸಿದರು. ನಂತರ ದುಡಿಕೊಟ್ ಪಾಟ್‍ನ್ನು ಕುಡಿಯರ ಮುತ್ತಪ್ಪ, ಜೀವನ್ ದೇವಯ್ಯ ಮತ್ತು ಬಳಗ ನೆರವೇರಿಸಿದರು. ದೇವರ ಸನ್ನಿಧಿಯಲ್ಲಿ ಪೊಗೇರ ಉಲ್ಲಾಸ್ ನಾಡಿನ ಮಳೆ, ಬೆಲೆ, ಸುಭಿಕ್ಷಗಾಗಿ ಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಮ್ಮಂಗೇರಿಯ ಜ್ಯೋತಿಷ್ಯರು ಈ ಹಿಂದೆ ನಿರ್ಧರಿಸಿದಂತೆ ಅಂಬಲವಾಸಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆಯೊಂದಿಗೆ ಗದ್ದೆ ಕಡೆ ಸಾಗಿ ಪೊಗೇರ ಅಪ್ಪಣ್ಣ ಅವರ ಗದ್ದೆಯಲ್ಲಿ ಕದಿರಿಗೆ ಪೂಜೆ ನೆರವೇರಿಸಿ ಕದಿರನ್ನು ಕೊಯ್ದುರು. ಈ ಸಂದರ್ಭ ಶುಭ ಸಂಕೇತವಾಗಿ ಆಕಾಶದ ಕಡೆಗೆ ಗುಂಡು ಹಾರಿಸಿ ಉದ್ಘೋರ್ಷಗಳು ಮುಗಿಲು ಮುಟ್ಟಿದವು. ಬಲಿಕ ಗದ್ದೆಯಿಂದ ಭತ್ತದ ಕದಿರಿ ನೊಂದಿಗೆ ಹಿಂತಿರುಗಿ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅರ್ಚಕರಿಗೆ ತೆನೆಗಳನ್ನು ಹಸ್ತಾಂತರಿಸಿದರು. ತೆನೆಗಳನ್ನು ದೇವಾಲಯದ ನಮಸ್ಕಾರ ಮಂಟಪದಲ್ಲಿರಿಸಿ ಅರ್ಚಕರಾದ ಕುಶ ಭಟ್, ಪ್ರಸಾದ್, ಶ್ರೀಕಾಂತ್, ಭತ್ತದ ತೆನೆಗಳನ್ನು ಪೂಜಿಸಿ ವಿಶೇಷ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಗರ್ಭಗುಡಿ ಸೇರಿದಂತೆ ವಿವಿಧ ಕಡೆ ಪ್ರಥಮವಾಗಿ ಕದರು ಕಟ್ಟಲಾಯಿತು. ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅರ್ಚಕರು ಕದಿರನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪೆÇಂಗೇರ ಅಪ್ಪಣ್ಣ, ಪುಂಗೇರ ಚಂಗಪ್ಪ, ಕಣಿಯರ ನಾಣಯ್ಯ, ಬೊಳ್ಳಿನಮ್ಮಂಡ ನಾಣಯ್ಯ, ಕೋಳೆಯಂಡ ಅಶೋಕ್, ಪುಂಗೇರ ಗಣೇಶ್, ಕಣಿಯಂಡ, ಕೋಳೆಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ ಸೇರಿದಂತೆ ಅಮ್ಮಂಗೇರಿ ಯವರು ಹಾಗೂ ಊರ ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.