ನಾಪೋಕ್ಲು ಡಿ.18 NEWS DESK : ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ನಾಪೋಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ನಾಡ್‍ಮಂದ್ ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‍ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್‍ನತ್ತ ಹೆಜ್ಜೆ ಹಾಕಿದರು. ಗ್ರಾಮದ ತಕ್ಕಮುಖ್ಯಸ್ಥರನ್ನು ಬಿದ್ದಾಟಂಡ ಕುಟುಂಬದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ವಾಗತಿಸಿದರು. ನಂತರ ಮಂದಿನಲ್ಲಿರುವ ಮರದ ಕೆಳಗೆ ದೇವರ ತಿರುವಾಭರಣ ಇಟ್ಟು ಪ್ರಾರ್ಥನೆ ಸಲ್ಲಿಸಿಲಾಯಿತು. ಬಳಿಕ ನಾಪೋಕ್ಲು ಗ್ರಾಮದವರು, ಕೊಳಕೇರಿಯ ಗ್ರಾಮಸ್ಥರನ್ನು ಬಿದ್ದಾಟಂಡ ವಾಡೆ ನಾಡ್ ಮಂದಿಗೆ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭ ಸಾಂಪ್ರದಾಯಿಕ ಪುತ್ತರಿ ಕೋಲಾಟಕ್ಕೆ ಚಾಲನೆ ನೀಡಿ ಬಿದ್ದಾಟಂಡ ವಾಡೆ ನಾಡ್ ಮಂದಿನಲ್ಲಿ ಮೂರು ಗ್ರಾಮದ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಸೇರಿ ಕೋಲಾಟದಲ್ಲಿ ಪಾಲ್ಗೊಂಡು ಕೊಂಬು ಕೊಟ್ಟು ನಾದಕ್ಕೆ ತಕ್ಕಂತೆ ಮಂದ್‍ಗೆ ಪ್ರದಕ್ಷಿಣೆ ಹಾಕಿ ಸಂಭ್ರಮಿಸಿದರು.
ಕಾಪಳಕಳಿ : ಪುತ್ತರಿ ಕೋಲಾಟದ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ (ತುರಿಕೆ ಸೊಪ್ಪು) ಕೋಲು ಹಿಡಿದು ವಾಧ್ಯಕ್ಕೆ ತಂಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಈ ಸಂದರ್ಭ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಪುತ್ತರಿ ಕೋಲಾಟದ ಇತಿಹಾಸ, ಮಹತ್ವದ ಬಗ್ಗೆ ಮೆಲುಕು ಹಾಕಿದರು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ಇತಿಹಾಸ ಪ್ರಸಿದ್ಧವಾಗಿರುವ ಪುತ್ತರಿ ಕೋಲಾಟ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವರದಿ : ದುಗ್ಗಳ ಸದಾನಂದ.