ಕುಶಾಲನಗರ ಡಿ.18 NEWS DESK : ಸೈನಿಕ ಶಾಲೆ ಕೊಡಗಿನಲ್ಲಿ ಡಿ.13 ಮತ್ತು 14ರಂದು 2024-25ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿ, ಕ್ರೀಡಾ ಸ್ಪೂರ್ತಿ, ಸಹಿಷ್ಣುತೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು, ಗೆಲುವು ಮತ್ತು ಸೋಲಿನ ಆಚೆಗೆ ಕ್ರೀಡೆಗಳು ನೀಡುವ ಅಮೂಲ್ಯವಾದ ಪಾಠಗಳ ಮಹತ್ವವನ್ನು ಎಲ್ಲಾ ವಿದ್ಯಾರ್ಥಿಗಳು ಕಲಿಯಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಮನಃಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮತ್ತು ಸೌಹಾರ್ದ ಕ್ರೀಡೆಯ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು. ಕ್ರೀಡಾ ಜ್ಯೋತಿ ರಿಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕೆಡೆಟ್ ಸಾಹಿಲ್ ರಾಜ್, ಕೆಡೆಟ್ ಶಿವರಾಜ್, ಕೆಡೆಟ್ ವಿಠ್ಠಲ್ , ಕೆಡೆಟ್ ಅಫ್ತಾಬ್, ಕೆಡೆಟ್ ಸಾನಿಕಾ ಉದಯ್ ಮತ್ತು ಕೆಡೆಟ್ ಪ್ರಜ್ವಲ್ ಪಾಲ್ಗೊಂಡಿದ್ದರು. ಶಾಲೆಯ ಕ್ರೀಡಾ ನಾಯಕ ಕೆಡೆಟ್ ಸಾಹಿಲ್ ರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಈ ಸಂದರ್ಭ ಕೆಡೆಟ್ ಸಾಹಿಲ್ ರಾಜ್ ಸ್ಪರ್ಧಾಳುಗಳಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಯುತ ಆಟ ಮತ್ತು ಶಿಸ್ತಿನ ಮೌಲ್ಯಗಳನ್ನು ಎತ್ತಿಹಿಡಿಯಲು ಅವರನ್ನು ಪ್ರೇರೇಪಿಸಿದರು. ಹಿರಿಯ ವಿದ್ಯಾರ್ಥಿಗಳಿಗಾಗಿ 4×100 ಮೀ ರಿಲೇ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರೀಡಾ ಕೂಟದಲ್ಲಿ ಗಮನಾರ್ಹ ಕೌಶಲ್ಯ, ಚುರುಕುತನ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ ಸುಬ್ರೊಟೊ ನಿಲಯವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಮುಖ್ಯ ಅತಿಥಿಗಳು ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿಪತ್ರ ಮತ್ತು ಪದಕಗಳನ್ನು ವಿತರಿಸಿ, ಅವರ ಶ್ರಮ ಮತ್ತು ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಪ್ರಾಮಾಣಿಕತೆ, ಧೈರ್ಯ, ಸಂಕಲ್ಪ ಮತ್ತು ಸಾಂಘಿಕ ಹೋರಾಟದ ಮೌಲ್ಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಕ್ರೀಡೆಗಳು ಮತ್ತು ಇತರ ಕ್ಷೇತ್ರಗಳಲ್ಲಿನ ವೃತ್ತಿಜೀವನವನ್ನು ಹೊಂದುವಂತೆ ತಿಳಿಸಿದರು. ಕ್ರೀಡಾಕೂಟವನ್ನು ಯೋಜಿತ ರೀತಿಯಲ್ಲಿ ಸಂಘಟಿಸಿದ ತಂಡವನ್ನು ಶ್ಲಾಘಿಸಿದರು ಹಾಗೂ ಮೌಲ್ಯಗಳೊಂದಿಗೆ ಸ್ಪರ್ಥಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭ ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ಎನ್ ವಿಬಿನ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿ , ಎನ್ ಸಿ ಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.