ಮಡಿಕೇರಿ ಡಿ.18 NEWS DESK : ಸಂಪೂರ್ಣವಾಗಿ ಹದಗೆಟ್ಟಿರುವ ಮತ್ತು ಸಂಚಾರಕ್ಕೆ ಯೋಗ್ಯವಲ್ಲದ ಮಡಿಕೇರಿ ತಾಲ್ಲೂಕಿನ ಗಾಳಿಬೀಡು-ಕಾಲೂರು ಗ್ರಾಮಗಳ ನಡುವಿನ ಮುಖ್ಯ ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಗಾಳಿಬೀಡು ರಸ್ತೆಯ 3ನೇ ಮೈಲ್ ಬಳಿ ಪ್ರತಿಭಟನೆ ನಡೆಸಿದರು. ಗಾಳಿಬೀಡು, ಕೋಳಿಗೂಡು, ವಣಚಲು, ಕಾಲೂರು, ಕೂಟುಹೊಳೆ, ಕೆ.ನಿಡುಗಣೆ ಮತ್ತು ಹೆಬ್ಬೆಟ್ಟಗೇರಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಿ ಸರಕಾರ, ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ಗುಂಡಿ ಬಿದ್ದಿರುವ ರಸ್ತೆಯನ್ನು ದುರಸ್ತಿ ಪಡಿಸಿಲ್ಲ. ಸರಕಾರ, ಜಿಲ್ಲಾಡಳಿತ, ಶಾಸಕರು, ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಸೂಕ್ತ ಸ್ಪಂದನ ದೊರೆತ್ತಿಲ್ಲ, ಇದೀಗ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದ್ದು, ಇದಕ್ಕೆ ಗ್ರಾಮಸ್ಥರ ಒಪ್ಪಿಗೆ ಇಲ್ಲ. ಗ್ರಾಮೀಣ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
::: ಇಂಜಿನಿಯರ್ ತರಾಟೆಗೆ :::
ಪ್ರತಿಭಟನೆಯ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಗುಂಡಿ ಬಿದ್ದ ರಸ್ತೆಯನ್ನು ಕಳಪೆ ಕಾಮಗಾರಿಯ ಮೂಲಕ ಗುಂಡಿ ಮುಚ್ಚಲಾಗುತ್ತಿದೆ. ತಕ್ಷಣ ನೂತನ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಈ ರಸ್ತೆಯ ಮೂಲಕವೇ ರೆಸಾರ್ಟ್‍ಗಳು ಮತ್ತು ಪ್ರವಾಸಿತಾಣಗಳಿಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸರಕಾರಕ್ಕೂ ಇದರಿಂದ ಉತ್ತಮ ಆದಾಯ ಲಭಿಸುತ್ತಿದೆ. ಹೀಗಿದ್ದರೂ ರಸ್ತೆ ಅಭಿವೃದ್ಧಿಗೆ ಮೀನ ಮೇಷ ಎಣಿಸಲಾಗುತ್ತಿದೆ ಎಂದು ಟೀಕಿಸಿದರು.
::: ಮಾರ್ಚ್ ಅಂತ್ಯದೊಳಗೆ ದುರಸ್ತಿ :::
ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾತನಾಡಿ ಮಡಿಕೇರಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಶಾಸಕರು 7.5 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಈ ಮೊತ್ತದಲ್ಲಿ ಮಡಿಕೇರಿ-ಕಡಮಕಲ್ಲು-ಸುಬ್ರಮಣ್ಯ ರಸ್ತೆಯ 4 ಕಿ.ಮೀ ರಸ್ತೆಯನ್ನು 1.50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. 1 ಕಿ.ಮೀ ರಸ್ತೆಯ ಮರು ನಿರ್ಮಾಣ ಮತ್ತು 3 ಕಿ.ಮೀ ರಸ್ತೆಯನ್ನು ದುರಸ್ತಿಗೊಳಿಸಿ ಸಾಮಥ್ರ್ಯ ಹೆಚ್ಚಿಸಲಾಗುತ್ತದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
::: ಹೋರಾಟದ ಎಚ್ಚರಿಕೆ :::
ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಗ್ರಾಮಸ್ಥರು, ತಾತ್ಕಾಲಿಕವಾಗಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ಗಾಳಿಬೀಡು ಗ್ರಾಮಸ್ಥರಾದ ನವೀನ್ ದೇರಳ. ಪಾಂಡೀರ ಸುಬ್ರಮಣಿ, ಹರೀಶ ರೈ, ಶಿವಪ್ರಸಾದ್ ರೈ, ಯು.ಎಸ್.ಗಿರೀಶ್, ಯಾಲದಾಳು ರಾಜಶೇಖರ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಾಗೇಶ್ ಕುಂದಲ್ಪಾಡಿ, ಕುಕ್ಕೇರ ಅಜಿತ್ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗಾಳಿಬೀಡು ನಿವಾಸಿ ಕೆ.ಕೆ.ಧರ್ಮಾವತಿ ಮಾಧ್ಯಮಗಳೊಂದಿಗೆ ಮಾತನಾಡಿ, ಎಷ್ಟೋ ವರ್ಷಗಳಿಂದ ಈ ರಸ್ತೆ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೂ ಕಷ್ಟವಾಗಿದೆ. ಅಧಿಕಾರಿಗಳು ಕೇವಲ ಭರವಸೆ ಮಾತ್ರ ನೀಡುತ್ತಾ ಬಂದಿದ್ದಾರೆ. ಓಟ್ ಬೇಕಾದರೆ ಮಂಚದಲ್ಲಿ ಮಲಗಿದ್ದವರನ್ನೂ ಹೊತ್ತು ಕೊಂಡು ಹೋಗಿ ವೋಟ್ ಹಾಕಿಸುವ ಜನಪ್ರತಿನಿಧಿಗಳು ನಂತರ ತಿರುಗಿಯೂ ನೋಡಿಲ್ಲವೆಂದು ತೀವ್ರ ಅಸಮಾಧಾನ ಹೊರ ಹಾಕಿದರು. ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ಸದಸ್ಯ ಡೀನ್ ಬೋಪಣ್ಣ ಮಾತನಾಡಿ, ರಸ್ತೆ ಅವ್ಯವಸ್ಥೆಯಿಂದ ಜನರು ಬೇಸತ್ತು ಇಂದು ಬೀದಿಗೆ ಇಳಿದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಮಾರ್ಚ್ ಅಂತ್ಯಕ್ಕೆ ರಸ್ತೆ ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇಲ್ಲವಾದಲ್ಲಿ ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ತಿಳಿಸಿದರು.