ಮಡಿಕೇರಿ ಡಿ.18 NEWS DESK : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರು ಘಂಟಿಗರು, ಜವಾನ, ಸ್ವಚ್ಛತಾ ಕೆಲಸಗಾರರನ್ನು ಏಕ ಕಾಲದಲ್ಲಿ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು, ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಟ ವೇತನವನ್ನು 31 ಸಾವಿರ ರೂ.ಗಳಿಗೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಕೊಡಗು ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಕೆಲಸ ಕಾರ್ಯಗಳಾಗದೆ ಜನ ಸಾಮಾನ್ಯರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಹುದ್ದೆ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಗ್ರಾ.ಪಂ.ಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ನೌಕರರ ಕುಟುಂಬಕ್ಕೆ ಪ್ರತಿ ತಿಂಗಳು 6 ಸಾವಿರ ರೂ. ಪಿಂಚಣಿ ನೀಡುವುದು, ನೀರು ಘಂಟಿಗಳನ್ನು ಮಲ್ಟಿ ಪರ್ಪಸ್ ಎಂದಿರುವುದನ್ನು ಕೈ ಬಿಟ್ಟು ನಿರ್ಧಿಷ್ಟಾವಧಿ ಕೆಲಸ ಎಂದು ನಿಗದಿ ಮಾಡುವುದು, ಗ್ರೇಡ್-1 ಪಂಚಾಯ್ತಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ತೀವ್ರ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸುವುದು ಸೇರಿದಂತೆ ಒಟ್ಟು 21 ಬೇಡಿಕೆಗಳನ್ನು ಸರಕಾರದ ಮುಂದಿಡಲಾಯಿತು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಇಲಾಖೆ ಅಪರ ಕಾರ್ಯದರ್ಶಿಗಳು ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷ ಮಹದೇವ್, ಜಿಲ್ಲಾ ಖಜಾಂಚಿ ವಸಂತ್, ಸದಸ್ಯರಾದ ವೀರಭದ್ರ, ಮುನಿಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.