ಮಡಿಕೇರಿ ಡಿ.18 NEWS DESK : ಅರಣ್ಯ ಹಾಗೂ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದ ಮೂಲ ಜೇನುಕುರುಬ ಸಮುದಾಯಕ್ಕೆ ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ವೀಡಿಯೊ ಸಂವಾದ ನಡೆಯಿತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಮೂಲನಿವಾಸಿ ಜೇನುಕುರುಬ ಸಮುದಾಯದವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕಿದ್ದು, ಮೂಲ ಸೌಲಭ್ಯ ಕಲ್ಪಿಸಲು ಬಾಕಿ ಇರುವ ಕುಟುಂಬಗಳಿಗೆ ತುರ್ತು ಕ್ರಮಕೈಗೊಳ್ಳುವಂತೆ ಆರ್.ಐಶ್ವರ್ಯ ಅವರು ಸೂಚಿಸಿದರು. ಈ ಬಗ್ಗೆ ಮಾತನಾಡಿದ ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಹೊನ್ನೇಗೌಡ ಅವರು ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಜೇನುಕುರುಬ ಸಮಾಜದವರು ಇದ್ದು, 3 ಸಾವಿರಕ್ಕೂ ಹೆಚ್ಚು ಜೇನುಕುರುಬ ಕುಟುಂಬಗಳು ಇವೆ. ಈಗಾಗಲೇ 8,710 ಜನರಿಗೆ ಆಧಾರ್ ಕಾಡ್‍ಣ್ನೀಡಲಾಗಿದೆ. ಉಳಿದಂತೆ 500 ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್ ಮಾಡಿಸಬೇಕಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಪಡಿತರ ಚೀಟಿ ಸಂಬಂಧಿಸಿದಂತೆ ಬಾಕಿ ಇರುವ ಕುಟುಂಬಗಳಿಗೆ ಪಡಿತರ ಚೀಟಿ ಒದಗಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಲು ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವುದರಿಂದ ಶಾಲೆಗೆ ಸೇರ್ಪಡೆ, ಜೊತೆಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ತಹಶೀಲ್ದಾರರು ಕೂಡಲೇ ಕ್ರಮ ವಹಿಸಿ ವರದಿ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಐಟಿಡಿಪಿ ಇಲಾಖಾ ಅಧಿಕಾರಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬೇಕಿರುವ ಕುಟುಂಬಗಳನ್ನು ಗುರುತಿಸಿ ಪ್ರಮಾಣ ಪತ್ರ ಪಡೆಯಲು ಮಾಹಿತಿ ನೀಡುವಂತೆ ಸೂಚಿಸಿದರು. ಆದಿವಾಸಿಗಳು ವಾಸಿಸುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು. ಈಗಾಗಲೇ ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದ್ದು, ಯಾವುದೇ ನೆಪ ಹೇಳುವುದು ಬೇಡ, ಅರಣ್ಯ ಇಲಾಖೆ ಅಧಿಕಾರಿಗಳು ಸಹ ಸಹಕರಿಸುವಂತೆ ಸಲಹೆ ನೀಡಿದರು. ಹಾಡಿಗಳಿಗೆ ಕುಡಿಯುವ ನೀರು, ರಸ್ತೆ ಸಂಪರ್ಕ ಕಲ್ಪಿಸಬೇಕು. ಆದಿವಾಸಿ ಜನರಿಂದ ದೂರು ಬರದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಆರ್.ಐಶ್ವರ್ಯ ಅವರು ನಿರ್ದೇಶನ ನೀಡಿದರು. ಜಿ.ಪಂ.ಎಂಜಿನಿಯರ್‍ಗಳಾದ ನಾಯಕ್, ಸುರೇಶ್ ಕುಮಾರ್, ಸೆಸ್ಕ್ ಎಇಇ ವಿನಯ್ ಕುಮಾರ್, ತಹಶೀಲ್ದಾರರಾದ ಪ್ರವೀಣ್ ಕುಮಾರ್, ರಾಮಚಂದ್ರ, ಮೋಹನ್ ಕುಮಾರ್, ಕಿರಣ್ ಗೌರಯ್ಯ, ಶ್ರೀಧರ, ಆಹಾರ ಇಲಾಖೆಯ ಕಿರಣ್ ಇತರರು ಇದ್ದರು.