ಮಡಿಕೇರಿ ಡಿ.19 NEWS DESK : ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸಂಘಟಿಸುವ ಮತ್ತು ಸದಸ್ಯತ್ವ ಅಭಿಯಾನವನ್ನು ಆರಂಭಿಸುವ ಸಲುವಾಗಿ ಡಿ.21 ರಂದು ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯ ಮಂತ್ರಿ ಚಂದ್ರು ಅವರು ಜಿಲ್ಲಾ ಕೇಂದ್ರ್ರ ಮಡಿಕೇರಿಗೆ ಆಗಮಿಸಲಿದ್ದಾರೆಂದು ಪಕ್ಷದ ಜಿಲ್ಲಾ ಅಧ್ಯಕ್ಷ ಮುಕ್ಕಾಟಿರ ಕೆ.ಅಪ್ಪಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ 2012ರಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಕಂಡು ಕೊಂಡಿದ್ದು, ಪ್ರಸ್ತುತ ಗ್ರಾಮೀಣ ಭಾಗಗಳಿಗೂ ಪಸರಿಸಿದ್ದು, ಸಾಕಷ್ಟು ಸದಸ್ಯರುಗಳನ್ನು ಹೊಂದಿದೆ. ನಮ್ಮೆಲ್ಲ ಪಕ್ಷದ ಸದಸ್ಯರನ್ನು ಅಭಿಮಾನಿಗಳನ್ನು ಸಂಘಟಿಸುವ ಚಿಂತನೆಯಡಿ ಮುಖ್ಯಮಂತ್ರಿ ಚಂದ್ರು ನಗರಕ್ಕೆ ಆಗಮಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬಾಲಭವನದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆಂದು ಮಾಹಿತಿ ನೀಡಿದರು. ಸಭೆಯ ಸಂದರ್ಭವೇ ಸದಸ್ಯತ್ವ ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದೆಂದು ತಿಳಿಸಿದ ಅಪ್ಪಯ್ಯ, ಮುಖ್ಯ ಮಂತ್ರಿ ಚಂದ್ರು ಅವರು ಅಂದು ಸ್ಥಳೀಯ ನಾಯಕರ ಸೌಹಾರ್ದ ಭೇಟಿ ಕಾರ್ಯಕ್ರಮವನ್ನು ಇಟ್ಟು ಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ಪಕ್ಷದ ಎಸ್‍ಸಿ-ಎಸ್‍ಟಿ ವಿಭಾಗದ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.