ಮಡಿಕೇರಿ ಡಿ.19 NEWS DESK : ರೈತರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.20 ರಂದು ರೈತ ಹೋರಾಟ ಸಮಿತಿ, ರೈತ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳು ಮಡಿಕೇರಿಯಲ್ಲಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೃಷಿ ಪ್ರಧಾನ ನಾಡಾಗಿರುವ ಕರ್ನಾಟಕದಲ್ಲಿ ಪ್ರಸ್ತುತ ಇರುವ ಸರಕಾರದಿಂದ ರೈತರಿಗೆ ನ್ಯಾಯ ಸಿಗುತ್ತಿಲ್ಲ. ತಲೆತಲಾಂತರಗಳಿಂದ ಕೃಷಿ ಕಾರ್ಯ ಮಾಡಿಕೊಂಡು ಬರುತ್ತಿರುವ ರೈತಾಪಿ ವರ್ಗ ಕೃಷಿಭೂಮಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಜೆಡಿಎಸ್ ಪಕ್ಷ ರೈತರ ಪರ ಸದಾ ಇದ್ದು, ಶುಕ್ರವಾರದ ಹೋರಾಟದಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರ ತಕ್ಷಣ ಎಚ್ಚೆತ್ತುಕೊಂಡು ಸಿ ಮತ್ತು ಡಿ ಭೂಮಿ ಗೊಂದಲ ನಿವಾರಿಸಬೇಕು, ಕೃಷಿಕರ ಭೂಮಿ ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು, ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ರೈತಪರ ಹೋರಾಟಗಳನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.