ಮಡಿಕೇರಿ ಡಿ.19 NEWS DESK : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರೈತ ಹೋರಾಟ ಸಮಿತಿ, ರೈತ ಸಂಘ ಹಾಗೂ ವಿವಿಧ ಸಂಘ, ಸಂಸ್ಥೆಗಳು ಡಿ.20 ರಂದು ಮಡಿಕೇರಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನೈತಿಕ ಬೆಂಬಲ ನೀಡಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಿ ಮತ್ತು ಡಿ ಭೂಮಿ ಸಮಸ್ಯೆಗೆ ಪರಿಹಾರ ಸೂಚಿಸುವ ಬದಲು ಗೊಂದಲ ಸೃಷ್ಟಿಸಲಾಗಿದೆ. ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಬಳಿಕೆ ಮಾಡಿಕೊಂಡಿರುವ ಸಾವಿರಾರು ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲು ವಿಫಲವಾಗಿರುವ ಸರಕಾರ ಸಣ್ಣ ರೈತರನ್ನು ಗುರಿ ಮಾಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದೆ. 99 ವರ್ಷಗಳಿಗೆ ಗುತ್ತಿಗೆ ನೀಡಿದ ಭೂಮಿಯನ್ನು 999 ವರ್ಷಗಳೆಂದು ವಂಚಿಸಿದ ದೊಡ್ಡ ಬಂಡವಾಳಶಾಹಿಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಕ್ರಮ ಕೈಗೊಳ್ಳದ ಸರಕಾರ ಸ್ಥಳೀಯ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕೊಡಗು ಜಿಲ್ಲಾವ್ಯಾಪಿ ಬಂಡವಾಳಶಾಹಿಗಳು ಎಕರೆಗಟ್ಟಲೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಐಶಾರಾಮಿ ಜೀವನ ಸಾಗಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಈ ಭೂಮಿಯನ್ನು ಸರಕಾರ ಮೊದಲು ತೆರವುಗೊಳಿಸಬೇಕು. ಅದನ್ನು ಬಿಟ್ಟು ಕೃಷಿಯನ್ನೇ ನಂಬಿಕೊಂಡು ಕೃಷಿ ಪದ್ಧತಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿರುವ ಬಡರೈತರ ಮೇಲೆ ಗದಾ ಪ್ರಹಾರ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಆದ್ದರಿಂದ ಶುಕ್ರವಾರ ನಡೆಯುತ್ತಿರುವ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತಿರುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.