
ಮಡಿಕೇರಿ NEWS DESK ಡಿ.19 : ಕೊಡಗು ಜಿಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಇದರ ವಿವಿಧ ಶಾಖೆೆಗಳು ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 34,95,016 ರೂ. ವಂಚಿಸಿರುವ ಪ್ರಕರಣದ 12 ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ನಗರದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಮೊಹಮ್ಮದ್ ರಿಜ್ವಾನ್ ಕೆ.ಎ.ಎಂಬಾತ ಇದೇ ಡಿ.4 ರಂದು 8 ಚಿನ್ನದ ಬಳೆಗಳನ್ನು ಅಡಮಾನವಿಟ್ಟು ಸಾಲ ಪಡೆಯುವ ಸಂದರ್ಭ, ಆಭರಣಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ಎನ್ನುವುದು ಕಂಡು ಬಂದಿದೆ. ಇದೇ ರೀತಿ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ, ಮೊಹಮ್ಮದ್ ಹನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ ಮತ್ತು ಹಂಸ ಎಂಬವರು ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕಡಂಗಗಳಲ್ಲಿನ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಕಾರ್ಪ್ ಮತ್ತು ಭಾಗಮಂಡಲ ವಿಎಸ್‌ಎಸ್‌ಎನ್ ಬ್ಯಾಂಕ್‌ಗಳಲ್ಲಿ ಒಟ್ಟು 625 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆದಿದ್ದರೆಂದು ತಿಳಿಸಿದರು. ವಂಚನೆ ಪ್ರಕರಣದಲ್ಲಿ ಕೇರಳ ರಾಜ್ಯದ ಮಲಪುರಂ ನಿವಾಸಿ ನವಾಜ್ ಎಂಬಾತನು ನಕಲಿ ಚಿನ್ನ ನೀಡಿರುವುದು ಕಂಡು ಬಂದಿದ್ದು, ಮತ್ತಷ್ಟು ತನಿಖೆ ನಡೆಸಿದ ಸಂದರ್ಭ ಈ ಕೃತ್ಯದ ರೂವಾರಿ ಕೇರಳದ ಎರ್ನಾಕುಲಂ ಜಿಲ್ಲೆಯ ಅಕ್ಕಸಾಲಿಗ ಮೊಹಮ್ಮದ್ ಕುಂಞ ಎಂಬುದು ಪತ್ತೆಯಾಗಿರುವುದಾಗಿ ಎಸ್‌ಪಿ ಮಾಹಿತಿ ನೀಡಿದರು.
::: ಬಂಧಿತ ಆರೋಪಿಗಳು :::
ಪ್ರಕರಣದ ಆರೋಪಿಗಳಾದ ಕುಂಜಿಲದ ಮೊಹಮ್ಮದ್ ರಿಜ್ವಾನ್, ಎಮ್ಮೆಮಾಡುವಿನ ರಿಯಾಜ್ ಪಿ.ಹೆಚ್., ಕುಂಜಿಲದ ಅಬ್ದುಲ್ ನಾಸೀರ್, ಮಲಪುರಂನ ನವಾಜ್ ಕೆ.ಪಿ., ಎರ್ನಾಕುಲಂನ ನಿಶಾದ್ ಕೆ.ಎ., ಮಹಮ್ಮದ್ ಕುಂಞ, ಪ್ರದೀಪ್ ಪಿ.ಜೆ., ಎಮ್ಮೆಮಾಡುವಿನ ಮೂಸಾ, ಪಡಿಯಾನಿಯ ಮಹಮ್ಮದ್ ಹನೀಫ್ ಎಂ.ಎಂ., ಎಮ್ಮೆಮಾಡುವಿನ ಖತೀಜಾ, ಅಯ್ಯಂಗೇರಿಯ ರಫೀಕ್ ಮತ್ತು ಫರಾನ್ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಒಟ್ಟು ಪ್ರಕರಣದಲ್ಲಿ ಪೊಲೀಸರು 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, 2 ಲಕ್ಷ ನಗದು, 1.40 ಲಕ್ಷ ಮೌಲ್ಯದ ಒಂದು ಐಫೋನ್ ವಶಪಡಿಸಿಕೊಂಡಿರುವುದಲ್ಲದೆ, ಬ್ಯಾಂಕ್ ಖಾತೆಯ ಫ್ರೀಜ್ ಮೊತ್ತ 2,08,221, ವಿಮೆ ಮೇಲೆ ಹಣ ಹೂಡಿಕೆಯ 1,26,504ನ್ನು ವಶಕ್ಕೆ ಪಡೆದಿರುವುದಾಗಿ ಎಸ್‌ಪಿ ಕೆ.ರಾಮರಾಜನ್ ತಿಳಿಸಿದರು. ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಸೆನ್ ಡಿವೈಎಸ್‌ಪಿ ರವಿ, ಸಿಪಿಐ ರಾಜು ಪಿ.ಕೆ., ಸಿಪಿಐ ಅನೂಪ್ ಮಾದಪ್ಪ, ಡಿಸಿಆರ್‌ಬಿ ಪಿಐ ಮೇದಪ್ಪ, ಮಡಿಕೇರಿ ನಗರ ಪಿಎಸ್‌ಐ ಲೋಕೇಶ್, ಭಾಗಮಂಡಲ ಪಿಎಸ್‌ಐ ಶೋಭಾ ಲಾಮಣಿ, ಅಪರಾಧ ಪತ್ತೆ ಸಿಬ್ಬಮದಿಗಳು, ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.












