ಸೋಮವಾರಪೇಟೆ ಡಿ.21 NEWS DESK : ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮಿಕತೆ ಅವಶ್ಯವಿದ್ದು, ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಅಕ್ಕನ ಬಳಗ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ಇಷ್ಟ ಲಿಂಗ ಪೂಜೆ ನೆರವೇರಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಹಾಗೂ ಬಿಡುವಿಲ್ಲದ ಕೆಲಸದಿಂದ ಜನರಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಪೂಜೆ ಹಾಗೂ ಧ್ಯಾನ ಮಾಡಿ ಒತ್ತಡವನ್ನು ಹಿಡಿತಕ್ಕೆ ತಂದುಕೊಳ್ಳಬೇಕು ಎಂದು ಹೇಳಿದರು. ದೇಹದ ಮೇಲೆ ಇಷ್ಟಲಿಂಗ ಧರಿಸಿ ಪೂಜಿಸುವ ಧರ್ಮವೊಂದು ಇದ್ದರೆ, ಅದು ವೀರಶೈವ ಲಿಂಗಾಯತ ಧರ್ಮವಾಗಿದ್ದು, ಇಲ್ಲಿ ಯಾವುದೇ ಸೂತಕಕ್ಕೂ ಆಸ್ಪದವಿಲ್ಲ. ಲಿಂಗಪೂಜೆ ಮುಖ್ಯವೆಂದರು. ಇಷ್ಟಲಿಂಗ ಪೂಜೆಗೆ ಪ್ರಾತಃಕಾಲ ಸೂಕ್ತವಾದದ್ದು. ಮನೆಯಲ್ಲಿ ತಮ್ಮ ಮಕ್ಕಳಿಗೆ ಪೂಜೆಯನ್ನು ಕಲಿಸಿ, ವಚನ ಹೇಳಿಸಿ ಆ ಮೂಲಕ ಶಿವ ಶರಣರ ಆಶಯವನ್ನು ಈಡೇರಿಸಬೇಕು. 2,3 ತಿಂಗಳಿಗೊಮ್ಮೆ ಇಂತಹ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಕಮ್ಮಟಗಳನ್ನು ಏರ್ಪಡಿಸಿದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಕಾರ್ಯದರ್ಶಿ ಮಾಯಾ ಗಿರೀಶ್, ಖಜಾಂಚಿ ಆಶಾ ಹೂವಯ್ಯ, ನಿರ್ದೇಶಕರುಗಳಾದ ಜಗದಾಂಭ, ರಜಿನಿ, ಮಂಜುಳಾ ಇದ್ದರು.