
ಸುಂಟಿಕೊಪ್ಪ NEWS DESK ಸೆ.8 : ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಸುಂಟಿಕೊಪ್ಪ ವೇವ್ ಸಂಘಟನೆಯ ಸದಸ್ಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್ ಅವರನ್ನು ಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಸಂಸ್ಥೆಯ ಸಂಚಾಲಕ ಕೆ.ಎ. ಲತೀಫ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿ 275 ಹಾದುಹೋಗಿದ್ದು, ವಾರಾಂತ್ಯದ ರಜಾ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. 7ನೇ ಹೊಸಕೋಟೆಯಿಂದ ಜಿಲ್ಲಾ ಕೇಂದ್ರದವರೆಗೆ ರಸ್ತೆ ತಿರುವುಗಳಿಂದ ಕೂಡಿದ್ದು, ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲು ವೈದ್ಯರು ಲಭ್ಯವಿಲ್ಲದ ಕಾರಣ ಅನೇಕ ಜೀವಗಳು ಮಾರ್ಗಮಧ್ಯೆ ಕಳೆದುಕೊಳ್ಳುವಂತಾಗಿದೆ ಎಂದು ಸಂಘಟನೆ ಆರೋಪಿಸಿದೆ. ಮಧ್ಯರಾತ್ರಿ ವೇಳೆ ಗ್ರಾಮಸ್ಥರಿಗೆ ಸಣ್ಣ ಪ್ರಮಾಣದಲ್ಲಿಯೂ ಆರೋಗ್ಯ ಸಮಸ್ಯೆ ಉಂಟಾದರೆ ದೂರದ ಮಡಿಕೇರಿ ಅಥವಾ ಕುಶಾಲನಗರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಗಲು-ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಶಾಶ್ವತ ಆಡಳಿತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಲಾಯಿತು. ಅಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕಾಡು ಗಿಡಗಂಟಿಗಳು ಬೆಳೆದು ನಿಂತಿದ್ದು, ಅವುಗಳನ್ನು ಸ್ವಚ್ಛಗೊಳಿಸಬೇಕು. ಆವರಣದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಹಾಗೂ ಕುಸಿದು ಬಿದ್ದಿರುವ ವಸತಿಗೃಹಗಳ ಅವಶೇಷಗಳು ವಿಷಪೂರಿತ ಜಂತುಗಳ ಅವಾಸಸ್ಥಾನವಾಗಿದ್ದು, ಸುತ್ತಮುತ್ತಲಿನ ನಿವಾಸಿಗಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ನೆಲಸಮಗೊಳಿಸಬೇಕೆಂದು ಮನವಿ ಮಾಡಲಾಯಿತು. ಮನವಿಗೆ ಕೂಡಲೇ ಸ್ಪಂದಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್ ಅವರು, ಮೂರು ದಿನಗಳಲ್ಲಿ ವೈದ್ಯರನ್ನು ನೇಮಕಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, 10 ದಿನಗಳ ಒಳಗೆ ಆಸ್ಪತ್ರೆ ಆವರಣದಲ್ಲಿ ಬೆಳೆದು ನಿಂತಿರುವ ಕಾಡು ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ತಿಳಿಸಿದರು. ಜನರ ಆರೋಗ್ಯವನ್ನು ಕಾಪಾಡುವ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವೇವ್ ಸಂಸ್ಥೆ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಕೆ.ಎ. ಲತೀಫ್ ಹೇಳಿದರು. ಈ ಸಂದರ್ಭ ವಕೀಲ ಫರಾಝ್ ಉಸ್ಮಾನ್ ಉಪಸ್ಥಿತರಿದ್ದರು.









