ಮಡಿಕೇರಿ ಡಿ.23 NEWS DESK : ವಿಶ್ವಕ್ಕೇ ಮಾದರಿಯಾಗಿರುವ ಮಹಾನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸಂಸತ್ ನಲ್ಲಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಸರಕಾರ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷ ನೆಲ್ಲಿಹುದಿಕೇರಿ ಶಾಖೆ ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನೆಲ್ಲಿಹುದಿಕೇರಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ನೆಲ್ಲಿಹುದಿಕೇರಿ ಶಾಖಾ ಕಾರ್ಯದರ್ಶಿಯಾದ ಪಿ.ಆರ್.ಭರತ್ ಮಾತನಾಡಿ ಡಾ.ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದರು. ನೊಂದವರ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸಿದ ಡಾ.ಅಂಬೇಡ್ಕರ್ ಅವರನ್ನು ಕಡೆಗಣಿಸಿರುವ ಅಮಿತ್ ಶಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ತಪ್ಪಿದಲ್ಲಿ ಸರಕಾರವೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲಾ ಸಿಪಿಐಎಂ ಕಾರ್ಯದರ್ಶಿಯಾದ ಹೆಚ್. ಬಿ.ರಮೇಶ್, ಸದಸ್ಯರಾದ ಮೊಣ್ಣಪ್ಪ, ರವಿ, ಉದಯಕುಮಾರ್, ಸೌಕತ್ ಆಲಿ, ಹಬೀಬ್, ಚಂದ್ರ , ಮುಸ್ತಫ, ಶಿವರಾಂ, ಬೋಜಿ, ಲಲಿತ ,ಕಾವೇರಿ, ರಾಜು, ಮಣಿ, ಮತ್ತು ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.