ಮಡಿಕೇರಿ ಡಿ.23 NEWS DESK : ಮಡಿಕೇರಿಯ ತನಲ್ ಆಶ್ರಮದ ಸಮಿತಿಯ ವಾರ್ಷಿಕ ಮಹಾ ಸಭೆಯು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮುಸ್ತಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ತನಲ್ ಕೇರಳ ಆಡಳಿತ ಮಂಡಳಿಯ ಸದಸ್ಯ ಆಲಿ ಮೊಹಮ್ಮದ್ ಮಾತನಾಡಿ, ನಿರಂತರವಾಗಿ ಸಹಕಾರ ನೀಡುತ್ತಿರುವ ಸಮಿತಿ ಸದಸ್ಯರು ಹಾಗೂ ದಾನಿಗಳನ್ನು ಸ್ಮರಿಸಿದರು. ಮುಂದಿನ 25-26ನೇ ಸಾಲಿಗೆ ಹೊಸ ಯೋಜನೆಗಳಿಂದ ಆಶ್ರಮವನ್ನು ಮುನ್ನಡೆಸಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ದೇಶಾದ್ಯಂತ ತನಲ್ ನೆರವಿನಿಂದ ಸುಮಾರು ಮೂರು ಲಕ್ಷ ಜನರು ವಿವಿಧ ವಿಭಾಗಗಳ ಮೂಲಕ ಸಹಾಯ ಪಡೆಯುತ್ತಿದ್ದಾರೆ. ಸುಮಾರು 60 ಸಾವಿರ ಅರ್ಹ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಸೇವೆಗಾಗಿ ಮುಡಿಪಾಗಿರುವ ತನಲ್ ಸಂಸ್ಥಯ ಭಾಗವಾಗಿರವುದು ನಮಗೆ ಅಭಿಮಾನವಿದೆ ಎಂದು ಹೇಳಿದರು. ತನಲ್ ಆಶ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು, ಅವರು ಪ್ರತಿ ದಿನದ ಹಾಲು, ಸಾಮಾಗ್ರಿಗಳು, ಸೌದೆ ವ್ಯವಸ್ಥೆ, ಕೋಕೋಡೊಮ ಹಾಗೂ ಅಲಂಕಾರ ಸಾಮಾಗ್ರಿಗಳನ್ನು ತಯಾರುಗೊಳಿಸುವ ಮೂಲಕ ಸಂಸ್ಥೆಯ ವರಮಾನಕ್ಕೆ ಕಾರಣವಾಗುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು. ತನಲ್ ಕೇರಳ ಆಡಳಿತ ಮಂಡಳಿಯ ವಿಶೇಷ ವಿಭಾಗದ ಸಂಯೋಜಕ ಪ್ರದೀಪ್ ಕುಮಾರ್ ಹಾಜರಿದ್ದರು. ಸಂಸ್ಥೆಯ ಕೋಶಾಧಿಕಾರಿ ಕರಾಮತುಲ್ಲಾ ಅಝ್ಘರ್ ಕಳೆದ ಸಾಲಿನ ಲೆಕ್ಕಾಚಾರವನ್ನು ಮಂಡಿಸಿದರು. ಕಾರ್ಯದರ್ಶಿ ಬಾಳೆಯಡ ದಿವ್ಯಾ ಕಳೆದ ವರ್ಷದ ವರದಿಯನ್ನು ಮಂಡಿಸಿದರು.
ಸಮಾಜ ಸೇವಕ ಸಂದೀಪ್ ಗೆ ಸನ್ಮಾನ :: ವೃತ್ತಿಯಲ್ಲಿ ಕ್ಷೌರಿಕರಾಗಿರುವ ಪಿ.ಜಿ.ಸಂದೀಪ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ದುರಂತ, ಕೋವಿಡ್ ಸಂದರ್ಭದಲ್ಲಿ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ಯಾವುದೇ ಪ್ರತಿಫಲಾ ಪೇಕ್ಷವಿಲ್ಲದೇ ಸೇವೆ ಮಾಡಿದ್ದಾರೆ. ಅಲ್ಲದೇ ನಿರಾಶ್ರಿತರು, ಮಾನಸಿಕ ಅಶ್ವಸ್ಥರು, ಬಿಕ್ಷುಕರ ತಲೆಗೂದಲನ್ನು ಉಚಿತವಾಗಿ ಕತ್ತರಿಸಿಕೊಡುತ್ತಿದ್ದಾರೆ. ಆಶ್ರಮಗಳಲ್ಲಿ ಮರಣ ಹೊಂದಿದ ಅನಾಥಶವಗಳನ್ನು ಪಡೆದು ಅಂತ್ಯಸಂಸ್ಕಾರ ನಡೆಸಲು ಮುಂದೆ ಬರುವ ಇವರ ಸೇವಾ ಕಾರ್ಯವನ್ನು ಪರಿಗಣಿಸಿ ತನಲ್ ಸಂಸ್ಥೆ “ತನಲ್ ಸೇವಾ ರತ್ನ ಪ್ರಶಸ್ತಿಯನ್ನು” ನೀಡಿ ಗೌರವಿಸಿತು. ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ, ತನಲ್ ಸಂಸ್ಥೆಯ ಸದಸ್ಯ ಹಾಗೂ ನಿವೃತ ಸೇನಾ ಸುಭೇದರ್ ಡೇವಿಡ್ ವೇಗಸ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಹಿರಿಯ ಸದಸ್ಯ ಬಾಬ ಚಂದ್ರ ಉಳ್ಳಾಗಡ್ಡಿ, ಸಂಸ್ಥೆಯ ಮಹಿಳಾ ಸಂಚಾಲಕಿ ಮುಹೀನ ಅಬೂಬಕ್ಕರ್, ಸದಸ್ಯೆ ಅಶ್ರಪುನ್ನೀಸ, ಉಮ್ಮರ್ ಹಾಗೂ ಮಹಿಳಾ ವಿಭಾಗದ ಪ್ರಮುಖರು ಪಾಲ್ಗೊಂಡಿದ್ದರು.