ಮಡಿಕೇರಿ NEWS DESK ಡಿ.24 : ಕಳೆದ ವರ್ಷ ಬರೆ ಕುಸಿದು ಹಾನಿಯಾಗಿದ್ದ ಕೊಯನಾಡು ಪ್ರಾಥಮಿಕ ಶಾಲೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಶಾಲಾ ಕಟ್ಟಡದ ಗೋಡೆಗೆ ಹೆಚ್ಚಿನ ಹಾನಿಯಾಗಿತ್ತು, ಮಕ್ಕಳ ಹಿತಿದೃಷ್ಟಿಯಿಂದ ಸಂಪಾಜೆ ಶಾಲೆಗೆ ಸ್ಥಳಾಂತರಿಸಲಾಗಿತ್ತು, ಆ ದಿಸೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಸುಭದ್ರತೆಯ ದೃಷ್ಟಿಯಿಂದ ಎಲ್ಲರೂ ಗಮನಿಸಬೇಕು. ಬೇಸಿಗೆ ಅವಧಿಯಲ್ಲಾದರೂ ತಾತ್ಕಾಲಿಕವಾಗಿ ಕೊಯನಾಡುವಿನಲ್ಲಿ ಪುನರಾರಂಭಿಸುವoತೆ ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡರವರು ಮಾತನಾಡಿ ಮಕ್ಕಳು ಶಾಲೆಯಿಂದ ವಂಚಿತರಾಗಬಾರದು, ಕೊಯನಾಡು ಶಾಲೆಯಲ್ಲಿ ಸುರಕ್ಷಿತ ಇಲ್ಲದಿರುವುದರಿಂದ ಸಂಪಾಜೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿತ್ತು ಸದ್ಯ ಮಕ್ಕಳಿಗೆ ಪ್ರಯಾಣಭತ್ಯೆ ಭರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಕೊಯನಾಡು ಶಾಲೆ ಸುರಕ್ಷತೆಯ ಬಗ್ಗೆ ಸಂಬoಧಪಟ್ಟವರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದು, ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿಡಿಂಜಿ ಕುಸುಮಾಕರ ಅವರು ಕಳೆದ 5 ತಿಂಗಳಿoದ ಯಾರೂ ಸಹ ತಿರುಗಿ ನೋಡಿಲ್ಲ, ಪೋಷಕರ ಜತೆ ಅಹವಾಲು ಆಲಿಸಿಲ್ಲ, ಎರಡು ಕಿ.ಮೀ ದೂರವಿರುವ ಸಂಪಾಜೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಟೋದಲ್ಲಿ ಕಳುಹಿಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ತುಂಬಾ ತೊಂದರೆಯಾಗಿದ್ದು, ಕೊಯಿನಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಸಂಪಾಜೆ ಗ್ರಾ.ಪಂ.ಸದಸ್ಯರಾದ ಸುರೇಶ್ ಅವರು ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಪ್ರವಚನ ಮುಂದುವರೆಸಬೇಕು ಎಂದು ಮನವಿ ಮಾಡಿದರು. ಕೊಯನಾಡು ಭಾಗದಲ್ಲಿ ಕೂಲಿಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊಯನಾಡು ಶಾಲೆಯನ್ನು ಪುನರ ಆರಂಭಿಸಲೇಬೇಕು ಎಂದು ಮೀನಾ ಕುಮಾರಿ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರಾದ ಗಣಪತಿ ಅವರು ಕೊಯನಾಡು ಪ್ರಾಥಮಿಕ ಶಾಲೆಯಲ್ಲಿಯೇ ತರಗತಿ ಆರಂಭವಾಗಬೇಕು ಎಂಬುದು ಇಲ್ಲಿನ ಸ್ಥಳೀಯರ ಒಕ್ಕೊರಲಾಗಿದೆ ಎಂದರು.
ಸ್ಥಳೀಯರಾದ ರಾಜೇಶ್ವರಿ ಅವರು ಈಗಾಗಲೇ ಡಿಸೆಂಬರ್ 23 ರಿಂದ ವಿದ್ಯಾರ್ಥಿಗಳು ಕೊಯನಾಡು ಶಾಲೆಗೆ ಬರುತ್ತಿದ್ದಾರೆ. ಆದ್ದರಿಂದ ಸ್ಥಳೀಯರು ಹಾಗೂ ಮಕ್ಕಳ ಪರಿಸ್ಥಿತಿ ಅರ್ಥ ಮಾಡಿಕೊಂಡು ತರಗತಿ ನಡೆಸಬೇಕು ಎಂದು ಮನವಿ ಮಾಡಿದರು.
ಮಧ್ಯಾಹ್ನದ ಬಿಸಿ ಊಟ, ಹಾಲು ಮತ್ತಿತರ ಸೌಲಭ್ಯವನ್ನು ಮುಂದುವರೆಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿ ಅಡಚಣೆ ಉಂಟಾಗದoತೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಕೋರಿದರು. ಈ ಸಂದರ್ಭದಲ್ಲಿ ಶಾಸಕರಾದ ಎ.ಎಸ್ ಪೊನ್ನಣ್ಣನವರು ಜಿಲ್ಲಾಧಿಕಾರಿಯವರ ಜೊತೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿ ಶಾಲೆಯ ಪುನರ್ ಆರಂಭ ಸಂಬoಧ ಶೀಘ್ರ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದರು. ಉಪ ವಿಭಾಗಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಕೊಯನಾಡುವಿನಲ್ಲಿ 1 ಎಕರೆ ಜಾಗವನ್ನು ಶಾಲಾ ಶಿಕ್ಷಣ ಇಲಾಖೆಗೆ ಗುರುವಾರವೇ ಹಸ್ತಾಂತರಿಸುವoತೆ ಸೂಚಿಸಿದರು. ಕೊನೆಯಲ್ಲಿ ಎಲ್ಲರ ಮಾತು ಆಲಿಸಿದ ಶಾಸಕರಾದ ಎ.ಎಸ್ ಪೊನ್ನಣ್ಣನವರು ತಾತ್ಕಾಲಿಕವಾಗಿ ಕೊಯನಾಡು ಶಾಲೆಯ ಪುನರಾರಂಭಕ್ಕೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಜತೆ ಶಾಸಕರು ಮಾತನಾಡಿದರು. ಸಂಪಾಜೆ ಗ್ರಾ.ಪಂ.ಸದಸ್ಯರಾದ ಸುರೇಶ್ ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಸಿ ಗುರುರಾಜ್, ಪಿಡಿಒ ಶೋಭಾರಾಣಿ, ಹೊಸೂರು ಸೂರಜ್ ಇತರರು ಇದ್ದರು.











