ಸುಂಟಿಕೊಪ್ಪ ಡಿ.25 NEWS DESK : ಏಸುಕ್ರಿಸ್ತನ ಜನ್ಮದಿನ ಕ್ರಿಸ್‍ಮಸ್ ಹಬ್ಬವನ್ನು ಸುಂಟಿಕೊಪ್ಪದ ವಿವಿಧೆಡೆ ಸಂಭ್ರಮದಿಂದ ಆಚರಿಸಿದರು. ಸಂತ ಅಂತೋಣಿ ದೇವಾಲಯದಲ್ಲಿ ಪ್ರಭು ಕ್ರಿಸ್ತರ ಜನನದ ಸ್ಥಳವಾದ ಗೋದಾಲಿಯನ್ನು ನಿರ್ಮಿಸಿ ಅದರಲ್ಲಿ ಏಸುಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ವಿಶೇಷ ಗಾಯನ ದಿವ್ಯ ಬಲಿಪೂಜೆ ಪ್ರಭೋದನೆಯೊಂದಿಗೆ ಆಡಂಬರ ದಿವ್ಯ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾ.ವಿಜಯಕುಮಾರ್ ಸಮರ್ಪಿಸಿದರು. ನಂತರ ಮಾತನಾಡಿದ ಅವರು, ಪ್ರಭುಕ್ರಿಸ್ತರು ಮಾನವರಲ್ಲಿ ಪರಸ್ಪರ ಪ್ರೀತಿ, ಅನ್ಯೂನತೆ, ಶಾಂತಿ, ಸಹಬಾಳ್ವೆಯ ಸಂದೇಶವನ್ನು ಜಗತ್ತಿಗೆ ಸಾರಿದ ಪ್ರಭು ಕ್ರಿಸ್ತರ ಸಂದೇಶವನ್ನು ಅಳವಡಿಸಿಕೊಂಡು ಇತರರೊಂದಿಗೆ ಪ್ರೀತಿ, ವಿಶ್ವಾಸದಿಂದ ಬದುಕು ನಡೆಸಬೇಕೆಂದು ಕರೆ ನೀಡಿದರು. ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ಮಕ್ಕಳು,ಯುವಕ, ಯವತಿರು, ಪುರುಷರು ಹಾಗೂ ಮಹಿಳೆಯರು, ನೂರಾರು ಸಂಖ್ಯೆಯಲ್ಲಿ ಸೇರಿದ ಕ್ರೈಸ್ತ ಭಾಂದವರು ಅಡಂಬರ ದಿವ್ಯ ಬಲಿಪೂಜೆ ಆರಾಧನೆಯಲ್ಲಿ ಪಾಲ್ಗೊಂಡು ಮುಂಬತ್ತಿಯನ್ನು ಹಚ್ಚಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಂತ ಅಂತೋಣಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‍ಮಸ್ ಅಂಗವಾಗಿ 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ರೇ.ಫಾ. ಸೆಬಾಸ್ಟಿನ್ ಪೂವತ್ತಿಗಲ್(ಸುನಿಲ್) ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ಸುಂಟಿಕೊಪ್ಪ ಸಿಎಸ್‍ಐ ಇಮಾನ್ಯುವೇಲ್ ಚರ್ಚ್‍ನಲ್ಲಿ ಸಭಾಪಾಲಕರಾದ ರೇ.ಪಾ.ಮಧುಕಿರಣ್ ಪ್ರಾರ್ಥನಾಕೂಟ ನಡೆಸಿದರು. ನಂತರ ಚರ್ಚ್ ಆವರಣದಲ್ಲಿ ಮಕ್ಕಳು ಸಾಂತಕ್ಲಾಸ್ ವೇಷದೊಂದಿಗೆ ನೃತ್ಯ ಹಾಗೂ ಯೇಸುವಿನ ಜನನದ ರೂಪಕವನ್ನು ಪ್ರದರ್ಶಿಸಿದರು. ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮಾದಾಪುರ ನಿರ್ಮಲಮಾತೆ ದೇವಾಲಂiÀi ಧರ್ಮಗುರುಗಳಾದ ಹಟ್ಟಿಹೊಳೆಯ ಜಪಸರ ಮಾತೆ ದೇವಾಲಯದಲ್ಲಿ ಧರ್ಮಗುರುಗಳಾದ ಫಾ.ಗಿಲ್ಬರ್ಟ್ ಡಿಸಿಲ್ವ ಅವರುಗಳು ಪ್ರಾರ್ಥನೆ, ಬಲಿಪೂಜೆ ಹಾಗೂ ಪ್ರಭೋದನೆಯನ್ನು ನೀಡಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತಭಕ್ತಾಧಿಗಳು ಪಾಲ್ಗೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಿಕೊಂಡರು.