ಮಡಿಕೇರಿ ಡಿ.25 NEWS DESK : ಪತ್ರಕರ್ತರು ಬರೆಯುವ ಎಲ್ಲಾ ಸುದ್ದಿಗಳು ವಸ್ತುನಿಷ್ಠವಾಗಿ, ವಾಸ್ತವವಾಗಿ ಇರಬೇಕು ಎಂದು ಪೊನ್ನಂಪೇಟೆಯ ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ ಜೀ ಹೇಳಿದರು. ಕಾನೂರು ರಸ್ತೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಪೊನ್ನಂಪೇಟೆ ತಾಲ್ಲೂಕು ಘಟಕದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಹರಿತವಾದ ವಸ್ತು ಖಡ್ಗ, ಆದರೆ ಪತ್ರಕರ್ತನ ಲೇಖನಿ ಅದಕ್ಕಿಂತ ಹರಿತವಾದದ್ದು ಎಂದು ಅವರು ಹೇಳಿದರು. ನೂತನವಾಗಿ ಉದ್ಘಾಟನೆಗೊಂಡ ಕಚೇರಿ ಸದ್ಬಳಕೆಯಾಗಲಿ. ಈ ಭಾಗದ ಜನರ ಆಶೋತ್ತರಗಳಿಗೆ ಧ್ವನಿಯಾಗಲಿ ಎಂದು ಶುಭ ಕೋರಿದರು. ಆಶ್ರಮದ ವತಿಯಿಂದ ಸಂಘದ ಕಚೇರಿಗೆ ನೀಡಲಾದ ಕಂಪ್ಯೂಟರನ್ನು ಸಂಘದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಪತ್ರಿಕಾಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೇಶವ್ ಕಾಮತ್ ಮಾತನಾಡಿ, ಸಂಘ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂದು ಆರಂಭವಾದ ಸಂಘ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದುವಂತಾಗಲಿ ಎಂದು ಹಾರೈಸಿದರು. ಇದೇ ಸಂದರ್ಭ ತಾಲೂಕು ಸಂಘದ ಕ್ಷೇಮ ನಿಧಿಗೆ 10 ಸಾವಿರ ರುಪಾಯಿ ದೇಣಿಗೆ ನೀಡಿದರು. ಇದೇ ಸಂದರ್ಭ ಕಟ್ಟಡದ ಮಾಲೀಕರಾದ ಚೆಪ್ಪುಡೀರ ಹ್ಯಾರಿ ದೇವಯ್ಯ, ಗೌರವ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿದರು. ದಾನಿಗಳಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ವಿನೋದ್ ಮೂಡಗದ್ದೆ, ಹಿರಿಯ ಪತ್ರಕರ್ತ ಟಿ.ಎಲ್.ಶ್ರೀನಿವಾಸ್, ಉಪಾಧ್ಯಕ್ಷ ಚಮ್ಮಟೀರ ಪ್ರವೀಣ್, ಚೆಪ್ಪುಡೀರ ರೋಷನ್, ಚಂಪಾ, ಗಗನ ಮುಂತಾದವರು ಉಪಸ್ಥಿತರಿದ್ದರು.