ಮಡಿಕೇರಿ ಡಿ.26 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಡಿ.30 ರಂದು ಬಿರುನಾಣಿಯಲ್ಲಿ ಕೈಬುಲಿರ ಪಾರ್ವತಿ ಬೋಪಯ್ಯ ದತ್ತಿ ಕಾರ್ಯಕ್ರಮ ನಡೆಯಲಿದೆ. ಬಿರುನಾಣಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿದಾನಿಗಳ ಆಶಯದಂತೆ 2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ 10ನೇ ತರಗತಿಯ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾದಾಪುರದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಅದವಿಯಾ ಯು. ಇವರನ್ನು ಗೌರವಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾನಂಗಡ ಅರುಣ್ ರವರು ವಹಿಸಲಿದ್ದು, ಉದ್ಘಾಟನೆಯನ್ನು ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮ್ಮತ್ತಿರ ರಾಜೇಶ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ
ಎಂ.ಪಿ ಕೇಶವ ಕಾಮತ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಎ.ಬಿ.ಲಾಲ ಅಪ್ಪಣ್ಣ, ಸಮಾಜ ಸೇವಕರಾದ ನರೇನ್ ಕಾರ್ಯಪ್ಪ, ಬಿರುನಾಣಿ ಸಹಕಾರ ಸಂಘದ ಅಧ್ಯಕ್ಷರಾದ ನೆಲ್ಲಿರ ಚಲನ್, ದತ್ತಿ ದಾನಿಗಳಾದ ಶ್ರೀಮತಿ ಕೈಬುಲಿರ ಪಾರ್ವತಿ ಬೋಪಯ್ಯ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ, ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ.ಬಿ ಸರಸ್ವತಿ ಮತ್ತು ಶ್ರೀ ಭಗವತಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಮಾಜಿ ಸೈನಿಕರೂ ಆದ ಕಾಳಿಮಾಡ ಮುತ್ತಣ್ಣ ಭಾಗವಹಿಸಲಿದ್ದಾರೆ. ದತ್ತಿದಾನಿಗಳ ಆಶಯದಂತೆ ವಿದ್ಯಾಭ್ಯಾಸದ ಅವಶ್ಯಕತೆ ಕುರಿತು ದತ್ತಿ ಉಪನ್ಯಾಸವನ್ನು ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಉಳುವಂಗಡ ಕಾವೇರಿ ಉದಯ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಬಂಧ, ಗೀತಗಾಯನ ಸ್ಪರ್ಧೆ ನಡೆಸಲಾಗಿದ್ದು ಮುಖ್ಯ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಕೆ.ವಿ ರಾಮಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.