ನಾಪೋಕ್ಲು ಡಿ.28 NEWS DESK : ಪಟ್ಟಣದಲ್ಲಿ ಆಟೋ ಚಾಲಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರಕ್ಕಾಗಿ ಪಂಚಾಯಿತಿ ಇತರ ಇಲಾಖೆಗಳಿಗೆ ಮನವಿ ಸಲ್ಲಿಸಿದರು. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿರುವ ಆಟೋ ಚಾಲಕರು ಡಿ.30 ರಂದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್ ಹೇಳಿದರು. ಸ್ಥಳಿಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯಿತಿ ಎದುರು ಆಟೊಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದೆಂದರು. ಪಟ್ಟಣದಲ್ಲಿ ಆಟೋ ಚಾಲಕರು ಸೂಕ್ತ ನಿಲ್ದಾಣ ಇಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಅಪ್ಪಚ ಕವಿ ರಸ್ತೆಯಲ್ಲಿ ಆಟೋ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು. ಆಟೋಗಳ ನಿಲುಗಡೆಗಾಗಿ ನಾಪೋಕ್ಲು-ಮಡಿಕೇರಿ ಮುಖ್ಯರಸ್ತೆಯಲ್ಲಿ 120 ಮೀಟರ್ ಅಂತರದ ಸ್ಥಳ ಅವಕಾಶ ಕಲ್ಪಿಸಿ ಕೊಡುವಂತೆ ಈ ಹಿಂದೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಗ್ರಾಮ ಪಂಚಾಯಿತಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಬೇತು ರಸ್ತೆಯಲ್ಲಿ ಆಟೋ ನಿಲುಗಡೆಗೆ 120 ಮೀಟರ್ ಆಟೋ ನಿಲ್ದಾಣದ ವ್ಯವಸ್ಥೆಯನ್ನು ಹಾಗೂ ಸೋಮವಾರದಂದು ಸಂತೆ ಮೈದಾನದ ಬಳಿ ಕನಿಷ್ಠ 20 ಆಟೊಗಳಿಗೆ ನಿಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸಭೆಯಲ್ಲಿ ಅವರು ಒತ್ತಾಯಿಸಿದರು. ಸಭೆಯ ನಿರ್ಧಾರದಂತೆ ಅಂತಿಮವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರತಿಭಟನೆಯನ್ನು ನಡೆಸಲ ತೀರ್ಮಾನಿಸಲಾಯಿತು. ಗೌರವ ಅಧ್ಯಕ್ಷ ಎಂ.ಇ.ರಜಾಕ್ ಅಧ್ಯಕ್ಷರ ಮಾತಿಗೆ ಸಹಮತ ವ್ಯಕ್ತಪಡಿಸಿ ಪ್ರತಿಭಟನೆಯ ನಿರ್ಧಾರಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು. ಈ ಸಂದರ್ಭ ಸಂಘದ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರತೀಶ್, ಖಜಾಂಚಿ ಹಂಸ, ಆಟೋ ಚಾಲಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.