ಮಡಿಕೇರಿ ಡಿ.28 NEWS DESK : ಸಾಮಾಜಿಕ ಜಾಲತಾಣದಲ್ಲಿ ಯೇಸುಕ್ರಿಸ್ತರನ್ನು ಅವಹೇಳನ ಮಾಡಿ ಕ್ರೈಸ್ತ ಸಮುದಾಯದ ಭಾವನೆಗೆ ದಕ್ಕೆ ತಂದಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ. ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿರುವ ಯೇಸುಕ್ರಿಸ್ತರು ಹಾಗೂ ಕ್ರಿಸ್‍ಮಸ್ ಹಬ್ಬದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು. ಕಿಡಿಗೇಡಿಯೊಬ್ಬ ಕ್ರಿಸ್‍ಮಸ್ ಹಬ್ಬದ ಕುರಿತು ಡಿ.25ರಂದು ಸಾಮಾಜಿಕ ಜಾಲತಾಣದಲ್ಲಿ ಅಗೌರವದ ಪೋಸ್ಟ್ ಮಾಡಿರುವುದಲ್ಲದೆ ಯೇಸುಕ್ರಿಸ್ತರನ್ನು ಕೀಳಾಗಿ ಕಂಡಿದ್ದಾನೆ. ಈತನ ಹೇಳಿಕೆಗೆ ಬೆಂಬಲವಾಗಿ ಮತ್ತೊಬ್ಬ ಕಿಡಿಗೇಡಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾನೆ. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದ್ದು, ಪೊಲೀಸರು ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಪ್ರಮುಖರು ಒತ್ತಾಯಿಸಿದರು. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ಯೇಸುವನ್ನು ಅವಹೇಳನ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಎಸ್‍ಪಿಗೆ ದೂರು ನೀಡುವ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸೈಯದ್ ಭಾವ, ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಪೀಟರ್, ಉಪಾಧ್ಯಕ್ಷ ಆಂಟನಿ ದಾಸ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಫೀಕ್ ಕೋಲುಮಂಡ, ಡಿಸಿಸಿ ಉಪಾಧ್ಯಕ್ಷ ಸುಬೀರ್ ಕಡಂಗ, ಸದಸ್ಯ ಮೊಹಮ್ಮದ್ ಎಡಪಾಲ, ಕಾಂಗ್ರೆಸ್ ಮುಖಂಡ ಸಾಜು ಜೇಕಬ್ ಹಾಜರಿದ್ದರು.