ಕುಶಾಲನಗರ ಡಿ.28 NEWS DESK : ಅರಣ್ಯವಾಸಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಲು ಕಳೆದ ಅನೇಕ ದಶಕಗಳ ಕಾಲ ಹೋರಾಟ ನಡೆಸಿ ಇದೀಗ ಅನಾರೋಗ್ಯಕ್ಕೆ ತುತ್ತಾಗಿರುವ ಮಾವಿನಹಳ್ಳ ಗಿರಿಜನ ಹಾಡಿಯ ಜೆ.ಪಿ.ರಾಜು ಹಾಗೂ ಅವರ ಪತ್ನಿ ಪಾರ್ವತಿ ಅವರನ್ನು ಹಾಡಿಯ ಅರಣ್ಯ ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಹಾಗೂ ಗಿರಿಜನ ಮುಖಂಡ ಆರ್.ಕೆ.ಚಂದ್ರು, ಧ್ವನಿ ಇಲ್ಲದ ಗಿರಿಜನ ವಾಸಿಗಳಿಗಾಗಿ ಹಗಲು ಇರುಳೆನ್ನದೇ ಹೋರಾಟ ನಡೆಸಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟ ಜೆ.ಪಿ.ರಾಜು ಅವರನ್ನು ಮಹಾತ್ಮ ಗಾಂಧಿಗೆ ಹೋಲಿಸಿದರಲ್ಲದೇ, ಕನಿಷ್ಟ ಗುಡಿಸಲು ಹಾಗೂ ಕುಡಿಯಲು ನೀರು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಅರಣ್ಯವಾಸಿಗಳು ಇದ್ದಂತಹ ಸಂದರ್ಭದಲ್ಲಿ ಮನೆ ಮಠ ತೊರೆದು ಗಿರಿಜನರ ಹಕ್ಕುಗಳಿಗಾಗಿ, ಗಿರಿಜನ ಮಕ್ಕಳ ಶಿಕ್ಷಣಕ್ಕಾಗಿ ಅವಿರತ ದುಡಿದಿರುವುದನ್ನು ನಾವು ಯಾರೂ ಕೂಡ ಮರೆಯುವಂತಿಲ್ಲ. ನಾಗರಹೊಳೆ ಅರಣ್ಯದಂಚಿನಲ್ಲಿ ತಾಜ್ ಗ್ರೂಫ್ ಅವರು ಹೋಟೆಲ್ ನಿರ್ಮಿಸಲು ಮುಂದಾದಗ ಜೆ.ಒಇ.ರಾಜು ಅವರ ಹೋರಾಟದಿಂದಾಗಿಯೇ ಅದು ಸ್ಥಗಿತಗೊಂಡಿತು. ಏನಾದರೂ ಧ್ವನಿ ಎತ್ತದೇ, ಹೋರಾಟ ನಡೆಸದೇ ಇದ್ದಿದ್ದರೆ ಹೋಟೆಲ್ ನಿರ್ಮಾಣದಿಂದಾಗಿ ವನ್ಯಜೀವಿಗಳಿಗೂ ತೊಂದರೆಯಾಗುತ್ತಿತ್ತು. ಅರಣ್ಯವಾಸಿಗಳ ನೆಮ್ಮದಿಯೂ ಹಾಳಾಗುತ್ತಿತ್ತು. 32 ವರ್ಷಗಳ ಕಾಲ ಹೀಗೆ ಅನೇಕ ಹೋರಾಟಗಳನ್ನು ರಾಜು ಅವರು ನಡೆಸಿದ್ದಾರೆ ಎಂದು ಸ್ಮರಿಸಿದರು. ಮತ್ತೋರ್ವ ಮುಖಂಡ ಕಾಳಿಂಗ ಮಾತನಾಡಿ, ಜೆ.ಪಿ.ರಾಜು ಅವರ ಹೋರಾಟದ ಫಲವಾಗಿ ಇಂದು ಜಿಲ್ಲೆಯ ಅನೇಕ ಗಿರಿಜನ ಹಾಡಿಗಳಲ್ಲಿ ನಿವಾಸಿಗಳು ಒಂದಷ್ಟು ಮಾನವರಾಗಿ ಬದುಕುತ್ತಿದ್ದಾರೆ. ಜೆ.ಪಿ.ರಾಜು ಅವರು ಅನಾರೋಗ್ಯಕ್ಕೆ ಒಳಗಾಗಿ ಹೋರಾಟದಿಂದ ದೂರ ಸರಿದ ಬಳಿಕ ಗಿರಿಜನರಿಗೆ ಧ್ವನಿಯೇ ಇಲ್ಲದ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು. ಮಾವಿನಹಳ್ಳ ಹಾಡಿಯ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಪಾಪಣ್ಣ, ಮುತ್ತಮ್ಮ, ಗೀತಾ, ನಾಗಮ್ಮ, ಗೋಪಾಲ, ಧರ್ಮ, ಕಟ್ಟೆಹಾಡಿ ಅಧ್ಯಕ್ಷ ಅಪ್ಪು, ಹಾಡಿಯ ಯಜಮಾನ ಪುಟ್ಟ ಮತ್ತಿತರ ಪ್ರಮುಖರು ಹಾಜರಿದ್ದರು.