ಸೋಮವಾರಪೇಟೆ NEWS DESK ಡಿ.29 : ಸರ್ಕಾರದ ಆದೇಶದಂತೆ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಜಮೀನುಗಳನ್ನು ಗುತ್ತಿಗೆ ನೀಡುವ ಸಂಬಂಧ ಅರ್ಜಿಗಳನ್ನು ನೀಡಲು ಕಾಲಾವಕಾಶವನ್ನು ವಿಸ್ತಿರಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಕಂದಾಯ ಮಂತ್ರಿಗಳಿಗೆ ಮನವಿ ಮಾಡಿದೆ. 1.1.2005 ರ ಪೂರ್ವದಲ್ಲಿ ಸರ್ಕಾರಿ ಜಮೀನನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಆ ಜಮೀನು ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸುವುದು ರೈತರಿಗೆ ಉಪಯೋಗವಾಗಿದೆ. ಅರ್ಜಿ ಸ್ವೀಕರಿಸುವ ಕಾಲಾವಕಾಶ 31.12.2024ರಂದು ಮುಕ್ತಾಯಗೊಳ್ಳಲಿದ್ದು, ದಿನಾಂಕವನ್ನು ವಿಸ್ತರಿಸಲು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾದ್ಯಂತ ಅರೇಬಿಕಾ ಹಾಗು ರೋಬಸ್ಟ ಕಾಫಿ ಮತ್ತು ಭತ್ತ ಕಟಾವು ಕೆಲಸ ನಡೆಯುತ್ತಿದೆ. ಅಕಾಲಿಕ ಮಳೆಯ ಭಯದಿಂದ ರೈತರು ಕೃಷಿ ಭೂಮಿಯಲ್ಲಿ ಕೆಲಸದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ತಾಲ್ಲೂಕು ಕಚೇರಿಗೆ ಬಂದು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲಾ ಕಾರಣದಿಂದ ದಿನಾಂಕವನ್ನು ವಿಸ್ತರಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿಯಿಂದ ಕಾಫಿ ಫಸಲು ಹಾನಿಯಾಗುತ್ತಿದ್ದು, ಕಾಫಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಸರ್ಕಾರದ ಗುತ್ತಿಗೆ ಒಪ್ಪಂದದ ಪ್ರಕಾರ ಮುಂದಿನ 30 ವರ್ಷಗಳ ಹಣವನ್ನು ಒಟ್ಟಿಗೆ ಪಾವತಿ ಮಾಡಲು ಕಾಫಿ ಬೆಳೆಯುವ ರೈತರಿಗೆ ಸಾಧ್ಯವಾಗುವುದಿಲ್ಲ. 10 ವರ್ಷಗಳಿಗೊಮ್ಮೆ ಮೂರು ಕಂತುಗಳಲ್ಲಿ ಪಾವತಿಸಲು ಅನುವು ಮಾಡಿಕೊಡಬೇಕಾಗಿ ಪತ್ರದಲ್ಲಿ ಮನವಿ ಮಾಡಿಕೊಡಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದೇವೆ ಎಂದು ಸಂಘದ ಅಧ್ಯಕ್ಷ ಬಿ.ಎಂ.ಲವ ತಿಳಿಸಿದ್ದಾರೆ.