ಮಡಿಕೇರಿ ಡಿ.30 NEWS DESK : ಓರೆ-ಕೋರೆಗಳನ್ನು ತಿದ್ದಿ ಸದೃಢ ಹಾಗೂ ಸುಭದ್ರ ಸಮಾಜ ನಿರ್ಮಾಣವಾಗಬೇಕಾದರೆ ಪತ್ರಕರ್ತರ ಪಾತ್ರ ಮಹತ್ತರವಾಗಿರುತ್ತದೆ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದರು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ 26ನೇ ವಾರ್ಷಿಕೋತ್ಸವ ಅಂಗವಾಗಿ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಒತ್ತಡದ ಬದುಕಿಗೆ ವಿರಾಮ ನೀಡಿ ಮನೋಲ್ಲಾಸ ಪಡೆಯವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಒಂದಾಗಿ ನಡೆಯುತ್ತಿದೆ. ಇದರಿಂದ ಪತ್ರಕರ್ತರಲ್ಲಿ ಒಗ್ಗಟ್ಟು ಮತ್ತಷ್ಟು ಹೆಚ್ಚಾಗಿದೆ ಎಂದರು. ಯುವ ಕಾಂಗ್ರೆಸ್ ನಾಯಕ ಮೈಸಿ ಕತ್ತಣಿರ ಮಾತನಾಡಿ, ಜಿಲ್ಲೆಯ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ದೇಶದ ಆಧಾರಸ್ತಂಭಗಳ ಪೈಕಿ ಮಾಧ್ಯಮ ಪ್ರಮುಖವಾಗಿದ್ದು, ಸದೃಢ, ಸುಭದ್ರ ಸಮಾಜಕ್ಕೆ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ಸಮಾಜದ ಸಕಾರತ್ಮಕ ಬದಲಾವಣೆಯಾಗಬೇಕಾದರೆ ಮಾಧ್ಯಮ ಕ್ಷೇತ್ರದ ಅಗತ್ಯ ಹೆಚ್ಚಿದೆ ಎಂದರು. ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಸಿ.ಇ.ತೀರ್ಥಕುಮಾರ್ ಮಾತನಾಡಿ, ಪತ್ರಕರ್ತರು ಸಮಾಜದ ಸಿಸಿ ಕ್ಯಾಮರವಿದ್ದಂತೆ. ಒಳಿತು-ಕೆಡುಕಿನ ಮೇಲೆ ಬೆಳಕು ಚೆಲ್ಲುವ ಲೇಖನಿ ಖಡ್ಗಕ್ಕಿಂತ ಹರಿತವಾಗಿದೆ. ಕೊಡಗಿನ ಮಣ್ಣು ಸ್ವಾಭಿಮಾನ, ಧೈರ್ಯದ ಗುಣ ಬೆಳೆಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕ್ಲಬ್ ನಿಂದ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕ್ಲಬ್ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜಾ, ಖಜಾಂಜಿ ತೇಜಸ್ ಪಾಪಯ್ಯ, ನಿರ್ದೇಶಕರಾದ ಇಸ್ಮಾಯಿಲ್ ಕಂಡಕರೆ, ವಿನೋದ್ ಕೆ.ಎಂ, ಲೋಹಿತ್ ಮಾಗುಲು, ಕೆ.ಎಸ್.ಲೋಕೇಶ್, ಮಂಜು ಸುವರ್ಣ ಇದ್ದರು. ಅಪೂರ್ವ ರವಿಕುಮಾರ್ ಪ್ರಾರ್ಥಿಸಿದರು, ಆನಂದ್ ಕೊಡಗು ನಿರೂಪಿಸಿದರು, ಚಂದನ್ ನಂದರಬೆಟ್ಟು ಸ್ವಾಗತಿಸಿದರು, ಹೆಚ್.ಜೆ.ರಾಕೇಶ್ ವಂದಿಸಿದರು. ಸನ್ಮಾನ ಕಾರ್ಯಕ್ರಮ :: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ಪತ್ರಕರ್ತ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಭಾಜನರಾದ ಪಿ.ವಿ.ಅಕ್ಷಯ್, ಬಾಚರಣಿಯಂಡ ಅನುಕಾರ್ಯಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪಡೆದ ಇಸ್ಮಾಯಿಲ್ ಕಂಡಕರೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೆಸ್ ಕ್ಲಬ್ ಡೇ ಅಂಗವಾಗಿ ಪತ್ರಕರ್ತರು ಹಾಗೂ ಕುಟುಂಬಸ್ಥರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.