ಮಡಿಕೇರಿ NEWS DESK ಡಿ.30 : ಸಾಂಪ್ರದಾಯಿಕ ‘ಕೊಡವ ಉಡುಪು’ ವಿಷಯದ ಕುರಿತು ಎರಡು ಸಮುದಾಯಗಳ ನಡುವೆ ಉದ್ಭವಿಸಿರುವ ಸೂಕ್ಷ್ಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಎಎಸ್‌ಪಿ ಸುಂದರರಾಜ್ ಅವರು ಖುದ್ದು ಕಟ್ಟೆಮಾಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಂಡರು. ದೇವಸ್ಥಾನದ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಒಬ್ಬರು ಎಎಸ್‌ಪಿ, ಇಬ್ಬರು ಡಿವೈಎಸ್‌ಪಿ, 5 ವೃತ್ತ ನಿರೀಕ್ಷಕರು, 10 ಮಂದಿ ಪಿಎಸ್‌ಐ ಸೇರಿದಂತೆ 300 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ದೇವಸ್ಥಾನ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ. ಇದರೊಂದಿಗೆ ಮೂರು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.