ಮಡಿಕೇರಿ NEWS DESK ಡಿ.30 : ಹೊಸ ವರ್ಷಾಚರಣೆಯ ಸಂದರ್ಭ ಯಾವುದೇ ರೇವ್ ಪಾರ್ಟಿ, ಮಾದಕ ವಸ್ತು ಮಾರಾಟ-ಸೇವನೆಗಳಿಗೆ ಅವಕಾಶವಿರುವುದಿಲ್ಲ. ಈ ರೀತಿಯ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮಜರಾಜನ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆೆಗೆ ರಾತ್ರಿ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಅದನ್ನು ಮೀರಿ ಸಾರ್ವಜನಿಕವಾಗಿ ಅಥವಾ ಅಕ್ಕ ಪಕ್ಕದ ಜನರಿಗೆ ತೊಂದರೆ ನೀಡಿ ಪಾರ್ಟಿ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಗುಪ್ತಚರ ಇಲಾಖೆ ಮತ್ತು ತಾಂತ್ರಿಕ ಗುಪ್ತಚರ ವಿಭಾಗದ ಸಭೆ ನಡೆಸಿ ಕಾನೂನು ಉಲ್ಲಂಘಿಸುವವರ ಮೇಲೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದರು. ಕೆಲವೊಂದು ಹೋಂ ಸ್ಟೇ- ರೆಸಾರ್ಟ್ಗಳಿಗೆ ಅನಿರೀಕ್ಷಿತವಾಗಿ ಪೊಲೀಸರು ಭೇಟಿ ನೀಡುವ ಸಾಧ್ಯತೆಗಳಿದೆ. ಯಾವುದಾದರು ಹೋಂ ಸ್ಟೇ ಅಥವಾ ರೆಸಾರ್ಟ್ ಕಾನೂನು ಉಲ್ಲಂಘಿಸಿದರೆ ಬಂದ್ ಮಾಡಲಾಗುವುದು ಎಂದು ಎಸ್‌ಪಿ ತಿಳಿಸಿದರು. ಹೊಸ ವರ್ಷಾಚರಣೆ ಪಾರ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ಮಾದಕ ವಸ್ತುಗಳು ಬಳಕೆಯಾಗುತ್ತಿದ್ದರೆ ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದೆಂದರು.










