ವಿರಾಜಪೇಟೆ ಡಿ.31 NEWS DESK : ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಮಹೋತ್ಸವವು ಎರಡು ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.ಮುಂಜಾನೆಯಿಂದಲೇ ಶ್ರೀ ಗಣಪತಿ ಹೋಮ, ಧ್ವಜಾರೋಹಣ ಹಾಗೂ ದೀಪಾರಾಧನೆ ನಡೆಯಿತು. ಸಂಜೆ ಸಭಾ ಕಾರ್ಯಕ್ರಮ ನಡೆದು ಮಹಾಪೂಜೆಯ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಎರಡನೆಯ ದಿವಸವು ಕೂಡ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮುಂಜಾನೆಯಿಂದಲೇ ನಡೆದವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ನಂತರ ಸಂಜೆ ದೀಪಾರಾಧನೆಯು ನಡೆದು ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಬೇಟೋಳಿ ಯಿಂದ ತಲಿಪೋಲಿ ಮೆರವಣಿಗೆಯು ಎಡಮಕ್ಕಿ ಸಾರ್ವಜನಿಕ ಮೈದಾನವರೆಗೆ ಸಾಗಿ ದೇವಸ್ಥಾನವನ್ನು ಪ್ರವೇಸಿಸಿತು. ಮಹಿಳೆಯರು ಹಾಗೂ ಮಕ್ಕಳು ದೀಪವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ನಂತರ ಮಹಾಪೂಜೆ ನಡೆದು ತಾಯಂಭಗಂ ಸೇವೆಯು ನಡೆಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಸೇವೆ ಜರುಗಿತು. ಅಯ್ಯಪ್ಪ ಮಾಲಾ ವೃತಾಧಾರಿಗಳಿಂದ ಭಜನೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್.ವಿಜಯನ್, ಕಾರ್ಯದರ್ಶಿ ವಿನುತ, ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮಹೇಶ್, ಮಹಿ ಕೂರ್ಗ್ ಅವರಿಂದ ಸಿಡಿಮದ್ದಿನ ಪ್ರದರ್ಶನ ನಡೆಯಿತು.