ಕುಶಾಲನಗರ ಡಿ.31 NEWS DESK : ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ನಾಡಿನಲ್ಲಿ ವೈಚಾರಿಕತೆಯನ್ನು ಭಿತ್ತಿದ ಸಾಹಿತ್ಯದ ಮೇರು ಪರ್ವತ ಕುವೆಂಪು ಎಂದು ಕೊಡಗಿನ ಹಿರಿಯ ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಪ್ರತಿಪಾದಿಸಿದರು. ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಸ್ಥಳೀಯ ಕನ್ನಡ ಭಾರತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಂಘರ್ಷಗಳನ್ನು ಎದುರಿಸಿ ಮಾನವತೆಯ ಮೇರು ಗಿರಿಯಾದ ಕುವೆಂಪು ಪರಿಸರವನ್ನೇ ದೇವರೆಂದರು.
ಪರಿಸರವನ್ನು ಆಹ್ಲಾದಿಸಿ ಆಸ್ವಾದಿಸಿದ ರಸ ಕವಿ ತಮ್ಮ ಬಹುಪಾಲು ಕಥೆ, ಕವನ, ಕಾದಂಬರಿ, ನಾಟಕ ಮೊದಲಾದ ಮಹಾಗ್ರಂಥಗಳನ್ನು ಬರೆದು ನಾಡಿನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಆದ್ದರಿಂದ ಇಂದಿನ ವಿದ್ಯಾರ್ಥಿ ಸಮೂಹ ಕನ್ನಡ ನಾಡಿಗೆ ರಸ ಋಷಿ ಕುವೆಂಪು ಕೊಟ್ಟಿರುವ ಸಾಹಿತ್ಯವನ್ನು ಉಳಿಸಿಕೊಂಡು ಹೋದರೆ ಅದು ಆ ವಿಶ್ವಮಾನವನಿಗೆ ಕೊಡುವ ಗೌರವವಾಗಲಿದೆ ಎಂದರು. ಕುವೆಂಪು ವಿಚಾರಧಾರೆಗಳ ಕುರಿತು ಮಾತನಾಡಿದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಂದ್ರಸ್ವಾಮಿ, ಅಖಂಡ ಕರ್ನಾಟಕದ ನಿರ್ಮಾಣಕ್ಕೆ ಕವಿಗಳು, ಸಾಹಿತಿಗಳು, ಋಷಿ ಮುನಿಗಳ ಕೊಡುಗೆಯನ್ನು ಬಣ್ಣಿಸಿದ್ದ ಕುವೆಂಪು, ಬೂಟಾಟಿಕೆಯ ರಾಜಕಾರಣವನ್ನು ಹರಿತವಾದ ಲೇಖನಿಯಲ್ಲಿ ಪ್ರಬಲವಾಗಿ ವಿರೋಧಿಸಿದ್ದರು. ಕನ್ನಡ ನಾಡು – ನುಡಿ, ಭಾಷೆ, ಸಂಸ್ಕೃತಿಗೆ ಜೀವ ಸವೆಸುವ ಮೂಲಕ ಸಾಹಿತ್ಯ ಲೋಕದಲ್ಲಿ ಸತ್ಯ -ಶಾಂತಿ, ಸಮಾನತೆಯೆಂಬ ಆರದ ಜ್ಯೋತಿಯನ್ನು ಹಚ್ಚಿದ ಮರೆಯಲಾಗದ ಮಾಣಿಕ್ಯ ಎಂದು ಬಣ್ಣಿಸಿದರು. ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಮಾರಕವಾದ ಮೊಬೈಲ್ ಅನ್ನು ದೂರವಿಟ್ಟು ಕುವೆಂಪು ಸಾಹಿತ್ಯವನ್ನು ಓದಲು ಡಾ.ನಾಗೇಂದ್ರ ಸ್ವಾಮಿ ಕರೆಕೊಟ್ಟರು. ರಾಷ್ಟ್ರ ಕವಿ ಕುವೆಂಪು ಕುರಿತಾದ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕನ್ನಡ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನ, ಕುವೆಂಪು ಕುರಿತು ಮಾತನಾಡಿದರಲ್ಲದೇ ಕುವೆಂಪು ವಿರಚಿತ ಕಾನೂರು ಸುಬ್ಬಮ್ಮ ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದು ಮಗಳು ಎಂಬ ಮೇರು ಗ್ರಂಥಗಳನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತಮಾಡಿದರು. ಇದೇ ಸಂದರ್ಭ ಸಾಹಿತಿ ಭಾರಧ್ವಜ್ ಆನಂದ ತೀರ್ಥರನ್ನು ವೇದಿಕೆ ವತಿಯಿಂದ ಗೌರವಿಸಲಾಯಿತು. ಸಾಹಿತ್ಯಾಸಕ್ತರ ವೇದಿಕೆಯ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಪುರಸಭೆಯ ಆರೋಗ್ಯಾಧಿಕಾರಿ ಉದಯಕುಮಾರ್, ಕಾಲೇಜಿನ ಉಪನ್ಯಾಸಕ ಕೆ.ರಾಮಚಂದ್ರ, ಮಂಜುನಾಥ್ ಇದ್ದರು. ವಿದ್ಯಾರ್ಥಿಗಳಾದ ಅಮೃಯ ಸ್ವಾಗತಿಸಿದರೆ, ವಿಸ್ಮಿತಾ ನಿರೂಪಿಸಿದರು. ಅಂಜಲಿ ತಂಡ ಪ್ರಾರ್ಥಿಸಿತು. ಪ್ರಜ್ವಲ್ ವಂದಿಸಿದರು.