ಮಡಿಕೇರಿ ಡಿ.31 NEWS DESK : ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಹಲಸಿನ ಮರವೇರಿದ ಕಾರ್ಮಿಕ ಪಣಿಎರವರ ಪೊನ್ನು ಅವರನ್ನು ಗುಂಡು ಹೊಡೆದು ಕೊಲೆಗೈದಿರುವುದು ಖಂಡನೀಯ. ಪ್ರಕರಣದ ಕುರಿತು ಶಾಸಕರು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯವೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮೈಸೂರು ಜಿಲ್ಲಾ ಪ್ರಮುಖ ಶೈಲೇಂದ್ರ ಕುಮಾರ್ ಕಾರ್ಮಿಕ ಪೊನ್ನು ಅವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣವನ್ನು ಶಾಸಕರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸರಕಾರ ತಕ್ಷಣ ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕಾಫಿ ತೋಟದ ಲೈನ್‍ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಬುಡಕಟ್ಟು ಕುಟುಂಬಗಳ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಮೃತನ ಕುಟುಂಬಕ್ಕೆ ತುರ್ತಾಗಿ ಸಾಂತ್ವನ ಹೇಳಬೇಕು, ಪುನರ್ವಸತಿ ಕಲ್ಪಿಸಬೇಕು. ಕಾಫಿ ತೋಟದ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು, ಮುಂದಿನ ಆರು ತಿಂಗಳೊಳಗೆ ಎಲ್ಲಾ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ನೀಡಬೇಕು, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ಎಸ್ಟೇಟ್‍ನ ಮಾಲೀಕರ ಹಾಗೂ ಕಾರ್ಮಿಕರ ಜನಸಂಪರ್ಕ ಸಭೆ ನಡೆಸಿ ಕಾನೂನು ಅರಿವು ಮೂಡಿಸಬೇಕು. ವಿಜಿಲೆನ್ಸ್ ಕಮಿಟಿಗಳನ್ನು ಸಕ್ರಿಯಗೊಳಿಸಬೇಕು, ಕಾಫಿ ತೋಟದ ಲೈನ್‍ಮನೆಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸೂಕ್ತ ಅಧ್ಯಯನ ನಡೆಸಿ ಹೊಸ ಕಾನೂನು ಜಾರಿಗೆ ತರಬೇಕೆಂದು ಶೈಲೇಂದ್ರ ಕುಮಾರ್ ಆಗ್ರಹಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು ಮಾತನಾಡಿ, ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ನ್ಯಾಯ ಸಿಗಬೇಕು ಎನ್ನುವ ಕಾರಣದಿಂದ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬುಡಕಟ್ಟು ಕುಟುಂಬಗಳಿಗೆ ನಿರಂತರ ಅನ್ಯಾಯವಾಗುತ್ತಿದ್ದು, ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇದೆ. ಆದರೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.ಸಂಘದ ಸದಸ್ಯೆ ಜೆ.ಕೆ.ಪುಷ್ಪ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಬುಡಕಟ್ಟು ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ, ನಮಗೆ ರಕ್ಷಣೆ ಇಲ್ಲದಾಗಿದೆ. ಗುಂಡಿಟ್ಟು ಕೊಲೆ ಮಾಡುವ ಹಂತಕ್ಕೆ ಪರಿಸ್ಥಿತಿ ಬಂದು ತಲುಪಿದೆ ಎಂದು ದೂರಿಕೊಂಡರು. ಮೃತ ಕಾರ್ಮಿಕ ಪಣಿಎರವರ ಪೊನ್ನು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಜಿಲ್ಲೆಯ ಬುಡಕಟ್ಟು ಜನರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ತಪ್ಪಿದಲ್ಲಿ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಜೆ.ಎಸ್.ಪದ್ಮ, ಪಿ.ಟಿ.ಜ್ಯೋತಿ ಹಾಗೂ ಕೊಟ್ಟ ಉಪಸ್ಥಿತರಿದ್ದರು.