ಮಡಿಕೇರಿ ಜ.2 NEWS DESK : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಾಗೂ ನಂ.561ನೇ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಮಡಿಕೇರಿಯ ಸಂಯುಕ್ತಾಶ್ರಯದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ನಡೆಯಿತು. ನಗರದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, 1997 ಕರ್ನಾಟಕ ಸೌಹಾರ್ದ ಕಾಯಿದೆ 2001 ಜನವರಿ 1 ರಂದು ಜಾರಿಗೆ ಬಂದಿತು. ಇದರ ಜ್ಞಾಪಕಾರ್ಥವಾಗಿ ಸೌಹಾರ್ದ ಸಹಕಾರಿ ದಿನವನ್ನು ಆಚರಿಸಲಾಗುತ್ತದೆ ಎಂದರು. 2005ರಲ್ಲಿ 200 ಸದಸ್ಯರೊಂದಿಗೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೊಡಗಿನಾದ್ಯಂತ ಸದಸ್ಯರನ್ನು ಹೊಂದಿದ್ದು, ಪ್ರಸ್ತುತ 2313 ಸದಸ್ಯರಿದ್ದಾರೆ. ಸದಸ್ಯರಿಗೆ ವಿವಿಧ ರೀತಿಯ ಸಾಲ, ಸದಸ್ಯರಿಂದ ಠೇವಣಿ ಸಂಗ್ರಹ, ವಿಮೆ ಸೇರಿದಂತೆ ಇ ಸ್ಟಾಂಪಿಂಗ್, ಆರ್.ಟಿ.ಸಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದ್ದು, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಲಾಭದಲ್ಲಿ ನಡೆಯುತ್ತಿದೆ. ಸಹಕಾರ ಸಂಘ ನಿಸ್ವಾರ್ಥ ಸೇವೆ ನೀಡುವುದರೊಂದಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಸತತ 7 ಬಾರಿ ಪ್ರಥಮ ಬಹುಮಾನ ಪಡೆದುಕೊಂಡಿದೆ. ಅಲ್ಲದೇ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇವರಿಂದ ರಾಜ್ಯ ಮಟ್ಟದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿಗೆ ಭಾಜನವಾಗಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ, ಜಿಲ್ಲೆಯ ಶ್ರೇಷ್ಠ ಸಹಕಾರಿ ಪ್ರಶಸ್ತಿ ಭಾಜನರಾದ ನಂದಿನೆರವಂಡ ರವಿ ಬಸಪ್ಪ ಅವರು, ಹಿಂದಿನ ಕಾಲದಲ್ಲಿ ಕೊಡವರು ತಮ್ಮ ಕೃಷಿ ಭೂಮಿ, ಜಮೀನುಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ಮಾರಾಟ ಮಾಡುತ್ತಿದ್ದರು, ಆದರೆ ಪ್ರಸ್ತುತ ದಿನಗಳಲ್ಲಿ ಸಹಕಾರಿ ಸಂಸ್ಥೆಯಿಂದ ತಮ್ಮ ಆಸ್ತಿಗಳನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು. ಕೊಡಗು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆ ಉತ್ತಮವಾಗಿದ್ದು, ಆರ್ಥಿಕ ಪ್ರಗತಿಯಿಂದ ಸಹಕಾರಿ ಕ್ಷೇತ್ರದ ಸಬಲೀಕರಣ ಸಾಧ್ಯ. ಎಲ್ಲಾ ಕ್ಷೇತ್ರಕ್ಕೂ ಸಹಕಾರಿ ಸಂಘಗಳ ಕಾರ್ಯವ್ಯಾಪ್ತಿ ಹಬ್ಬಿದ್ದು, ಉತ್ತಮ ಆಡಳಿತ ಮಂಡಳಿಯ ಸಹಕಾರವಿದ್ದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಹಾಗೂ ನಿವೃತ್ತ ಪ್ರಾಂಶುಪಾಲೆ ಮುಕ್ಕಾಟೀರ ಎ.ಪೊನ್ನಮ್ಮ ಮಾತನಾಡಿ, ಸಹಕಾರ ಸಂಘ ಗ್ರಾಮೀಣ ಜನರ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ. ರೈತರಿಗೆ, ಸಾಮಾನ್ಯ ಜನರ ಸೇವೆಯನ್ನು ಸಲ್ಲಿಸುವ ಮೂಲಕ ಆರ್ಥಿಕ ಸಂಪತ್ತನ್ನು ದ್ವಿಗುಣಗೊಳಿಸಿದೆ. ಇಂತಹ ಮಹತ್ತರ ಸಹಾಯವನ್ನು ನೀಡುವ ಸಹಕಾರ ಸಂಘವನ್ನು ಮತ್ತಷ್ಟು ಬಲಪಡಿಸುವಂತಾಗಬೇಕು ಎಂದರು.
ಸರ್ವ ಸದಸ್ಯರು ಸಹಕಾರ ಸಂಘದ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಅದರಂತೆ ಪ್ರತಿಯೊಬ್ಬರು ತಮ್ಮ ಮಕ್ಕಳು, ಕುಟುಂಬಸ್ಥರು ಹಾಗೂ ನೆರೆಕರೆಯ ಮನೆಯವರನ್ನು ಸಂಘದ ಸದಸ್ಯರಾಗಿಸುವ ಮೂಲಕ ಸದಸ್ಯ ಬಲವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ ಮಣವಟ್ಟೀರ ಬಿ.ಮಾಚಯ್ಯ, ಹಲವು ವರ್ಷಗಳಿಂದ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ನಮ್ಮದೇ ಆದ ಕಟ್ಟಡ, ಜಾಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಿ ಜಾಗ ಗುರುತಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಾಟೋಳಂಡ ಡಿ.ಚರ್ಮಣ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ನಿರ್ದೇಶಕರಾದ ಚೋವಂಡ ಡಿ.ಕಾಳಪ್ಪ, ಮಣವಟ್ಟೀರ ಬಿ.ಮಾಚಯ್ಯ, ಕೊಂಗಾಂಡ ಎ.ತಿಮ್ಮಯ್ಯ, ಪಟ್ಟಡ ಎ.ಕರುಂಬಯ್ಯ, ಕುಡುವಂಡ ಬಿ.ಉತ್ತಪ್ಪ, ಕೇಕಡ ಯಂ.ಸುಗುಣ, ಶಾಂತೆಯಂಡ ಟಿ.ದೇವರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಳ್ಳೇಂಗಡ ಪಿ.ಸಿ.ನೀಮಾ, ವ್ಯವಸ್ಥಾಪಕ ಚೋವಂಡ ಪಿ.ಗೌತಮ್ ಮೇದಪ್ಪ, ಸಿಬ್ಬಂದಿ ಮಂದೇಟಿರ ಪಿ.ತಶ್ವಿನ್ ತಮ್ಮಯ್ಯ, ಕೊಡಗು ವಿದ್ಯಾನಿಧಿಯ ಕಾರ್ಯದರ್ಶಿ ಮೇದುರ ಪಿ.ಕಾವೇರಿಯಪ್ಪ, ಕೊಡವ ಸಮಾಜದ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷೆ ಎಂ.ಜಿ.ಉಷಾ ಉತ್ತಯ್ಯ ವಂದಿಸಿದರು.
:: ಹಿರಿಯ ಸಹಕಾರಿಗಳಿಗೆ ಸನ್ಮಾನ :: ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಮಣವಟ್ಟೀರ ಬಿ.ಮಾಚಯ್ಯ, ಪೇರಿಯಂಡ ಪಿ.ಪೆಮ್ಮಯ್ಯ, ಸುಳ್ಳಿಮಾಡ ಪಿ.ಮಾದಪ್ಪ, ಪುದಿಯೊಕ್ಕಡ ಎಸ್.ಈರಪ್ಪ, ಪೆಮ್ಮಂಡ ಎ.ಸರಸ್ವತಿ, ಬೈರೇಟ್ಟಿರ ಎಸ್.ಬಿದ್ದಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿಗಳು ಸಂಘದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.