ಪೊನ್ನಂಪೇಟೆ: ಜ.3 NEWS DESK : ಸುಮಾರು ಎರಡು ಶತಮಾನಗಳಷ್ಟು ಹಳೆಯ ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ಇದೀಗ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಸೀದಿಯಾಗಿ ಪುನರ್ ನಿರ್ಮಾಣಗೊಂಡಿದ್ದು, ಜ.4 ರಂದು ಲೋಕಾರ್ಪಣೆಗೊಳ್ಳಲಿದೆ. ನೂತನ ಮಸೀದಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಜ.4ರಿಂದ ಜ.6ರವರಿಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲೋಕಾರ್ಪಣೆಗೆ ಮುನ್ನುಡಿಯಾಗಿ ನಡೆದ ನೂತನ ಮಸೀದಿಗೆ ಸಾರ್ವಜನಿಕ ಮಹಿಳೆಯರ ಸಂದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪೊನ್ನಂಪೇಟೆ ತಾಲ್ಲೂಕಿನಲ್ಲೆ ಸುವಿಶಾಲವಾದ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ನೂತನ ಶಾಫಿ ಜುಮಾ ಮಸೀದಿ ಆಧುನಿಕ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯ ಮಿನಾರ್ ರಹಿತ ವಿಭಿನ್ನವಾದ ಆರಾಧನಾಲಯವಾಗಿ ಮೂಡಿಬಂದಿದೆ. ಇದು ನೆಲ ಮತ್ತು ಪ್ರಥಮ ಅಂತಸ್ತುಗಳನ್ನು ಹೊಂದಿದೆ. ನೂತನ ಮಸೀದಿಯ ನೆಲ ಮತ್ತು ಪ್ರಥಮ ಅಂತಸ್ತು ತಲಾ 4300 ಚ.ಅ. ವಿಸ್ತೀರ್ಣ ಹೊಂದಿದ್ದು, ಒಟ್ಟು 8,600 ಚ.ಅ. ಅಗಲದ ಈ ಮಸೀದಿಯನ್ನು 600 ಮಂದಿ ಏಕಕಾಲದಲ್ಲಿ ನಮಾಜು ಮಾಡಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ನೆಲ್ಯಹುದಿಕೇರಿಯ ಇಂಜಿನಿಯರ್ ಮೊಹಿಮೀನ್ ಈ ಮಸೀದಿಯ ನೀಲನಕಾಶೆ ತಯಾರಿಸಿದರೆ, ನೆಲ್ಯಹುದಿಕೇರಿಯ ಸಿವಿಲ್ ಗುತ್ತಿಗೆದಾರರಾದ ಅಶ್ರಫ್ (ಕುಂಜ್ಹನ್) ಮಸೀದಿ ನಿರ್ಮಾಣದ ಕೆಲಸ ನಿರ್ವಹಿಸಿದ್ದಾರೆ. ನೆಲ ಅಂತಸ್ತಿನ ಒಳಾಂಗಣದಲ್ಲಿ ಮಾಡಲಾದ ಮರದ ವಿನ್ಯಾಸ ಕೆಲಸ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಧರ್ಮ ಗುರುಗಳು ವಿವಿಧ ಬೋಧನೆ ನಡೆಸುವ ಭಾಷಣ ಪೀಠವನ್ನು ಮತ್ತು ನಮಾಜ್, ಪ್ರಾರ್ಥನೆಗಳಿಗೆ ಪವಿತ್ರ ಮಕ್ಕಾದ ದಿಕ್ಕನ್ನು ಸೂಚಿಸುವ ಮಿಹರಾಬ್ ಅನ್ನು ಪೂರ್ಣವಾಗಿ ಮರದಿಂದಲೇ ವಿನ್ಯಾಸಗೊಳಿಸಲಾಗಿದೆ. 2020ರಿಂದ ಆರಂಭಗೊಂಡು ಕಳೆದ 44 ತಿಂಗಳುಗಳಿಂದ ನಿರಂತರವಾಗಿ ನಡೆದ ಈ ಮಸೀದಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ಇದೀಗ ಭರದಿಂದ ಸಾಗುತ್ತಿದೆ. ಜೊತೆಗೆ ಮಸೀದಿಯ ಆವರಣ ಗೋಡೆಯನ್ನೂ ನೂತನವಾಗಿ ನಿರ್ಮಿಸಲಾಗಿದೆ. ಈ ಮಸೀದಿ ನಿರ್ಮಾಣ ಕಾರ್ಯಕ್ಕೆ ಧರ್ಮಭೇದ ಲೆಕ್ಕಿಸದೆ ಸಾಕಷ್ಟು ಸ್ಥಳೀಯರು ಸಹಕಾರ ನೀಡಿದ್ದಾರೆ. ಬೇರೆ ಬೇರೆ ಭಾಗದ ಅನ್ಯ ಧರ್ಮದವರು ಆರ್ಥಿಕ ಸಹಾಯದ ರೂಪದಲ್ಲಿ ಮತ್ತು ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ವಸ್ತುಗಳ ರೂಪದಲ್ಲಿ ಸಹಕಾರ ನೀಡಿ ಭಾತೃತ್ವ ಮೆರೆದಿರುವುದು ಇಲ್ಲಿಯ ವಿಶೇಷವಾಗಿದೆ. ನೂತನ ಮಸೀದಿಯ ಉದ್ಘಾಟನೆಯ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೆ ಬರುವ ಜನರ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳೀಯ ಬಹಳಷ್ಟು ಅನ್ಯಧರ್ಮಿಯರು ತಮ್ಮ ಜಾಗವನ್ನು ಒದಗಿಸಿ ಸಹೋದರತ್ವ ಎತ್ತಿ ಹಿಡಿದಿದ್ದಾರೆ.
ವಿವಿಧ ಕಾರ್ಯಕ್ರಮಗಳು: : ಜ.4 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರು, ಪ್ರಸಿದ್ಧ ವಿದ್ವಾಂಸರಾದ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್ ನೂತನ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕೊಡಗಿನ ಎಡಪಾಲದ ಅಬ್ದುಲ್ಲಾ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ, ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಲಿದ್ದಾರೆ. ಹೆಸರಾಂತ ಧರ್ಮಗುರು ಯಾಹ್ಯ ಬಾಖವಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಜ.5ರಂದು ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಧರ್ಮಗುರು ಝಯಾದ್ ದಾರಿಮಿ ಪ್ರಧಾನ ಭಾಷಣ ಮಾಡಲಿದ್ದು, ಅಂದು ರಾತ್ರಿ ಅನ್ವರ್ ಅಲಿ ಹುದವಿ ಅವರ ನೇತೃತ್ವದಲ್ಲಿ ಇಶ್ಕ್ ಮಜ್ಲೀಸ್ ಜರುಗಲಿದೆ. ಜ. 6ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಪಾಣಕ್ಕಾಡಿನ ಸೈಯದ್ ಮೊಯೀನ್ ಅಲಿ ಶಿಹಾಬ್ ತಂಗಳ್ ಉದ್ಘಾಟಿಸಲಿದ್ದಾರೆ. ಹೆಸರಾಂತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತಾನಾಪುರಂ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಹೆಚ್ ಸೂಫಿ ಹಾಜಿ, ಗೋಣಿಕೊಪ್ಪಲು ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಆಲಿ ಫೈಝಿ, ಕೊಡಗು ಜಿಲ್ಲಾ ಎಸ್. ಕೆ.ಎಸ್. ಎಸ್. ಎಫ್. ಪ್ರಧಾನ ಕಾರ್ಯದರ್ಶಿಗಳಾದ ರಫೀಕ್ ಬಾಖವಿ ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿಯ ಅಧ್ಯಕ್ಷರು, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಪೊನ್ನಂಪೇಟೆ ಶಾಪಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್ ತಿಳಿಸಿದ್ದಾರೆ.
ಇತಿಹಾಸ:: ಸುಮಾರು 200 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿ ಆರಂಭದಲ್ಲಿ ಹುಲ್ಲು ಹೊದಿಕೆಯ ಮಣ್ಣಿನ ಕಟ್ಟಡಯೊಂದರರಲ್ಲಿ ಆರಂಭವಾಯಿತು ಎನ್ನಲಾಗಿದೆ. ನಂತರ ಹಂಚು ಹಾಕಿದ ಕಟ್ಟಡವಾಗಿ ಮಾರ್ಪಟ್ಟು ಮುಂದುವರಿಯುತ್ತಾ ಬಂದು ಕಳೆದ ಹಲವು ವರ್ಷಗಳ ಹಿಂದೆ ಆರ್. ಸಿ. ಸಿ. ಕಟ್ಟಡದ ರೂಪು ಪಡೆಯಿತು. ಈ ಕಟ್ಟಡ ಅಂದಾಜು 40 ವರ್ಷಗಳ ಹಳೆಯದಾದರಿಂದ ಶಿಥಿಲಾವಸ್ಥೆಗೆ ತಲುಪಿತ್ತು. ಈ ಕಾರಣದಿಂದ ಹಳೆಯ ಮಸೀದಿ ಕಟ್ಟಡವನ್ನು ಪೂರ್ಣವಾಗಿ ಕೆಡವಿ ಅದೇ ಸ್ಥಳದಲ್ಲಿ ಈ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ. ಪೊನ್ನಂಪೇಟೆಯ ಅಹಮದ್ ಹಾಜಿ ಅಧ್ಯಕ್ಷರಾಗಿರುವ ಮತ್ತು ಪಿ.ಎ. ಅಸೀಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿ ವಿಶೇಷ ಆಸಕ್ತಿಯಿಂದ ಈ ಮಸೀದಿ ನಿರ್ಮಾಣ ಕಾರ್ಯವನ್ನು ನೋಡಿಕೊಂಡಿದ್ದು, 2020ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಇದೇ ಆಡಳಿತ ಮಂಡಳಿ ಇದೀಗ ಈ ನೂತನ ಮಸೀದಿಯ ಆರಂಭೋತ್ಸವಕ್ಕೆ ನೇತೃತ್ವ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.