ಮಡಿಕೇರಿ NEWS DESK ಜ.5 : ಸಾಂಪ್ರದಾಯಿಕ ವಸ್ತç ಧರಿಸುವ ವಿಚಾರದಲ್ಲಿ ವಿವಾದದ ಕೇಂದ್ರವಾಗಿ ಮಾರ್ಪಟ್ಟಿರುವ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದ ಆಡಳಿತ ಮಂಡಳಿ ಇಂದು ನಡೆಸಿದ ಸಭೆ ಒಮ್ಮತ್ತದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಯಿತು. ಶ್ರೀ ಮಹಾಮೃತ್ಯುಂಜಯ ದೇವಾಲಯಕ್ಕೆ ಸಾಂಪ್ರದಾಯಿಕ ಉಡುಪು ಧರಿಸಿ ಪ್ರವೇಶಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಶಾಂತಿಸಭೆ ನಡೆಸಿದ್ದರು. ಆಡಳಿತ ಮಂಡಳಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮರಗೋಡು ಸಹಕಾರ ಸಂಘದ ಸಭಾಂಗಣದಲ್ಲಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದೇವಾಲಯದ ವಾರ್ಷಿಕೋತ್ಸವದ ಕೊನೆಯ ದಿನ ಗ್ರಾಮಸ್ಥರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಬರಲು ಅವಕಾಶ ನೀಡುವ ಕುರಿತು ಪ್ರಸ್ತಾಪಿಸಲಾಯಿತು ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಕೆಲವರು ಒಪ್ಪಿಗೆ ಸೂಚಿಸದೆ ಇದ್ದುದರಿಂದ ಸಭೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದೆ ಪ್ರಸ್ತಾಪಿಸಲ್ಪಟ್ಟ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ನಿರ್ಣಯಿಸಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ಸಭೆಯಲ್ಲಿ ನಡೆದ ವಿಚಾರವನ್ನು ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು. ಜಿಲ್ಲಾಧಿಕಾರಿಗಳು ನೀಡುವ ಆದೇಶಕ್ಕೆ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು. ಸಭೆಯಲ್ಲಿ ದೇವಾಲಯ ಆಡಳಿತ ಮಂಡಳಿಯ 13 ಪದಾಧಿಕಾರಿಗಳು ಹಾಗೂ ಉಪ ಸಮಿತಿಯ ಸದಸ್ಯರು ಸೇರಿ 40 ಮಂದಿ ಪಾಲ್ಗೊಂಡಿದ್ದರು.