ಕುಶಾಲನಗರ ಜ.9 NEWS DESK : ಅಖಿಲ ಭಾರತ ಯುನೈಟೆಡ್ ಕಿಸಾನ್ ಮಹಾ ಸಭಾದ ಕೊಡಗು ಸಮಿತಿಯ ವತಿಯಿಂದ ಕುಶಾಲನಗರದ ತಹಶೀಲ್ದಾರ್ ಕಛೇರಿ ಬಳಿ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ ಸರ್ಕಾರಗಳನ್ನು ಒತ್ತಾಯಿಸಲು ” ಹಕ್ಕೊತ್ತಾಯ ದಿನ ” ಆಚರಿಸಲಾಯಿತು. ಕಿಸಾನ್ ಮಹಾ ಸಭಾದ ಕೇಂದ್ರ ಸಮಿತಿಯ ಪದಾಧಿಕಾರಿ ನಿರ್ವಾಣಪ್ಪ ಅವರ ನೇತೃತ್ವದಲ್ಲಿ ನಡೆದ ಹಕ್ಕೊತ್ತಾಯದಲ್ಲಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ನಿರ್ವಾಣಪ್ಪ, ಕೇಂದ್ರದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಕೃಷಿ ಕಾರ್ಮಿಕರು, ಅಸಂಘಟಿತ, ಐಸಿಡಿಎಸ್, ಮಧ್ಯಾಹ್ನದ ಊಟದ ಕಾರ್ಮಿಕರಿಗೆ ವೇತನವನ್ನು ಹೆಚ್ಚಿಸದೇ ವಂಚಿಸಲಾಗುತ್ತಿದೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ವಿಫಲವಾಗಿದೆ. ನಿರುದ್ಯೋಗಿ ಜನರಿಗೆ 200 ದಿನಗಳ ಕಾಲ ದಿನಕ್ಕೆ 600 ರೂಗಳ ಕೂಲಿಯಂತೆ ನೀಡಲು ಮನರೇಗಾ ಯೋಜನೆಗೆ ಅನುದಾನವನ್ನು ನೀಡುತ್ತಿಲ್ಲ ಎಂದು ನಿರ್ವಾಣಪ್ಪ ದೂರಿದರು. ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಯ ಕಾನೂನು ಖಾತರಿ ಒದಗಿಸಬೇಕು. ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 2006 ರ ಅರಣ್ಯ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು.
ಮನೆಯಿಲ್ಲದ ಭೂರಹಿತರಿಗೆ ಭೂಮಿ, ಹಸಿದವರಿಗೆ ಆಹಾರ, ಮನೆಯಿಲ್ಲದವರಿಗೆ ಮನೆ ಹಾಗೂ ಉದ್ಯೋಗಗಳನ್ನು ನೀಡಬೇಕೆಂಬ ಹಕ್ಕೊತ್ತಾಯಗಳ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಮೂಲಕ ಸಲ್ಲಿಸಿದರು. ಈ ಸಂದರ್ಭ ಕಿಸಾನ್ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಜೆ.ಪ್ರಕಾಶ್, ಪ್ರಮುಖರಾದ ಸಣ್ಣಪ್ಪ, ಸಾವಿತ್ರಮ್ಮ, ಜವರಯ್ಯ, ಹೆಚ್.ಬಿ.ರಾಜು, ಚಿಣ್ಣಪ್ಪ, ಮಂಜು ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.