ಮಡಿಕೇರಿ ಜ.9 NEWS DESK : ಶಾಂತಿ, ಸಹಬಾಳ್ವೆಗೆ ಆದ್ಯತೆ ನೀಡುತ್ತಿರುವ ಗೌಡರನ್ನು ಗುರಿ ಮಾಡಿಕೊಂಡು ವಿನಾಕಾರಣ ಕೊಡವರು ಹಾಗೂ ಗೌಡರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಸಂಘಟನೆಯೊಂದು ಮಾಡುತ್ತಿದೆ ಎಂದು ಆರೋಪಿಸಿರುವ ಚೆಟ್ಟಳ್ಳಿಯ ಚೇರಳ ಗೌಡ ಸಂಘ, ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರು ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದ ಸಂದರ್ಭ ವಸ್ತ್ರ ಸಂಹಿತೆ ಕುರಿತು ಉಂಟಾದ ಕಲಹದಿಂದ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಸ್ವಯಂ ಘೋಷಿತ ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರು ಜಿಲ್ಲೆಯಲ್ಲಿ ಗೌಡರು ಮತ್ತು ಕೊಡವರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ಆಶಯದಂತೆ ಭಾರತೀಯರು ಭಾರತದ ಯಾವ ಭಾಗದಲ್ಲಿ ನೆಲೆಸಿದರೂ ಭಾರತೀಯರೇ ಆಗಿರುತ್ತಾರೆ ಹೊರತು ಪರಕೀಯರಲ್ಲ. ಗೌಡರನ್ನು ಹೊರಗಿನವರು ಎಂದು ಪ್ರತಿಬಿಂಬಿಸಿ ನಿಂದಿಸುತ್ತಿರುವುದು ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ನಾವು ಸಹಬಾಳ್ವೆಗೆ ಆದ್ಯತೆ ನೀಡುತ್ತೇವೆಯೇ ಹೊರತು ವಿಷಬೀಜ ಬಿತ್ತುವ ಕೆಲಸ ಮಾಡುವುದಿಲ್ಲ. ಇನ್ನಾದರೂ ಕೊಡಗಿನ ಜನ ಒಗ್ಗಟ್ಟಾಗಿ ಕಿಚ್ಚು ಹಚ್ಚುವ ಸಂಘಟನೆಯ ವಿರುದ್ಧ ಜಾಗೃತರಾಗಬೇಕೆಂದು ಕರೆ ನೀಡಿದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕೆಡಿಸುತ್ತಿರುವ ವ್ಯಕ್ತಿಗಳು ಕೊಡಗಿನ ಗೌಡರ ಜಾತಿ ನಿಂದನೆ ಮಾಡಿ, ಇವರುಗಳು ಗೌಡರೇ ಅಲ್ಲ, ಇವರಿಗೆ ಗೌಡರ ಸಾಮ್ಯತೆಯೇ ಇಲ್ಲ, ಇವರಿಗೂ ಒಕ್ಕಲಿಗರಿಗೂ ಸಂಬಂಧವೇ ಇಲ್ಲ, ಇವರು ಆಂಧ್ರಪ್ರದೇಶದಿಂದ ಬಂದವರು ಎಂಬಿತ್ಯಾದಿ ಆಘಾತಕಾರಿ ಮತ್ತು ಅಸಹನೀಯ ಹೇಳಿಕೆಗಳನ್ನು ನೀಡಿರುತ್ತಾರೆ. ಅಲ್ಲದೆ ಗೌಡರ ಅಸ್ತಿತ್ವವನ್ನು ಪ್ರಶ್ನಿಸಿ ಜನಾಂಗವನ್ನು ನಿಂದಿಸಿರುತ್ತಾರೆ. ಪ್ರಚೋದನಾಕಾರಿ ಸಂದೇಶದ ವಿರುದ್ಧ ಈಗಾಗಲೇ ದೂರು ಸಲ್ಲಿಸಿದ್ದು, ಇನ್ನೂ ಕ್ರಮ ಕೈಗೊಂಡಿಲ್ಲ. ಇದರ ನಡುವೆಯೇ ಮತ್ತೆ ಮತ್ತೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೌಡ ಜನಾಂಗದವರು ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪೊಲೀಸ್ ನೀಡಿದ ಕಾನೂನು ಹಾಗೂ ಶಾಂತಿ ಕಾಪಾಡುವ ಕರೆಗೆ ಸೌಮ್ಯವಾಗಿ ಸ್ಪಂದಿಸಿದ್ದಾರೆ. ಆದರೆ ಕಿಡಿಗೇಡಿಗಳು ಮಾಡುತ್ತಿರುವ ನಿಂದನೆಗಳು ಮತ್ತೆ ಜಿಲ್ಲೆಯಲ್ಲಿ ಶಾಂತಿ ಕದಡಲು ಕಾರಣವಾಗುತ್ತಿದೆ. ಕಟ್ಟೆಮಾಡು ಮಹಾಮೃತ್ಯುಂಜಯ ಶ್ರೀ ಕ್ಷೇತ್ರವನ್ನು ಆ ಗ್ರಾಮಸ್ಥರೇ ಕಷ್ಟಪಟ್ಟು ಕಟ್ಟಿದಂತಹ ಒಂದು ಕ್ಷೇತ್ರ. ಹಾಗಾಗಿ ಮೂರನೇಯವರು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಜಿಲ್ಲಾಡಳಿತ ಯಾವ ಕಾನೂನು ಕ್ರಮವನ್ನು ಕೈಗೊಳ್ಳುವುದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅಯ್ಯಂಡ್ರ ರಾಘವಯ್ಯ ಸ್ಪಷ್ಟಪಡಿಸಿದರು. ಈ ಕ್ಷೇತ್ರದ ವಿಷಯವನ್ನು ನೆಪಮಾಡಿಕೊಂಡು ಗೌಡ ಜನಾಂಗವನ್ನು ದೂಷಣೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಕೋವಿ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸೈನಿಕರ ನಿಂದನೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ವಿಷಯಗಳಲ್ಲಿ ಗೌಡ ಜನಾಂಗವನ್ನು ದೂಷಣೆ ಮಾಡುವುದು ಖಂಡನೀಯ. ಕೊಡಗಿನಲ್ಲಿ ವಿಷ ಬೀಜ ಬಿತ್ತಲು ಪ್ರಚೋದನೆ ನೀಡುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಗಡಿಪಾರು ಮಾಡಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಕೊಡಗು ಸರ್ವ ಜನಾಂಗಗಳಿಗೆ ಸೇರಿದ ಪ್ರದೇಶವಾಗಿದ್ದು, ಇದು ಕರ್ನಾಟಕದ ಒಂದು ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಇರುವ ಎಲ್ಲರೂ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳೇ ಆಗಿದ್ದು, ಎಲ್ಲರಿಗೂ ಬಂದು ಬದುಕಲು ಹಕ್ಕು ಇದೆ. ಕೊಡಗಿನ ಶಾಂತಿಯನ್ನು ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು. ಗೌಡ ಸಂಘದ ಉಪ ಖಜಾಂಚಿ ಪೇರಿಯನ ಉದಯ ಮಾತನಾಡಿ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಕಟ್ಟುಪಾಡುಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಗ್ರಾಮಸ್ಥರೆಲ್ಲರು ಸೇರಿ ಮಾಡಿದ ಬೈಲಾದ ಪ್ರಕಾರ ಎಲ್ಲವೂ ನಡೆಯುತ್ತಿದೆ. ಆದರೆ ಇಲ್ಲಿನ ವಿಚಾರವನ್ನು ಮುಂದಿಟ್ಟುಕೊಂಡು ಗೌಡರನ್ನು ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲವೆಂದರು. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜಾತಿ ಜನಾಂಗದವರು ಒಗ್ಗಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸಂಘಟನೆಯೊಂದು ಪ್ರಚೋದನೆ ನೀಡುತ್ತಾ ಒಡಕು ಮೂಡಿಸುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೊಸಮನೆ ಟಿ.ಪೂವಯ್ಯ, ಕಾರ್ಯದರ್ಶಿ ಆಜೀರ ಧನಂಜಯ, ಉಪ ಕಾರ್ಯದರ್ಶಿ ಮರದಾಳು ಜನಾರ್ಧನ ಹಾಗೂ ಖಜಾಂಚಿ ಮುಕ್ಕಾಟಿ ಪಳಂಗಪ್ಪ ಉಪಸ್ಥಿತರಿದ್ದರು.