ಕುಶಾಲನಗರ ಜ.11 NEWS DESK : ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಳ್ಳುವ ಮೂಲಕ ಸದಾ ಅಧ್ಯಯನಶೀಲರಾದಲ್ಲಿ ಹೆಚ್ಚಿನ ಜ್ಞಾನವಂತರಾಗಲು ಸಾಧ್ಯ. ಜ್ಞಾನಕ್ಕೆ ಸರಿ ಸಮನಾದ ಗೌರವ ಸಮಾಜದಲ್ಲಿ ಮತ್ತೊಂದಿಲ್ಲ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕರೆ ನೀಡಿದರು. ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ವವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಓದು ಉದ್ಯೋಗ ತಂದು ಕೊಟ್ಟರೆ, ಜ್ಞಾನ ಅವರನ್ನು ಅನ್ವೇಷಣೆಗೆ ಈಡು ಮಾಡುತ್ತದೆ ಎಂದು ಹೇಳಿದ ಶಶಿಧರ್, ಅಬ್ದುಲ್ ಕಲಾಂ, ಅಂಬೇಡ್ಕರ್, ಬುದ್ಧ, ಬಸವಣ್ಣನಂತಹ ಮೇರು ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು.ನೈತಿಕತೆ, ಸಚ್ಚಾರಿತ್ರ್ಯ, ಉತ್ತಮ ಸಂಸ್ಕಾರ ಇರುವವರಲ್ಲಿ ದೇಶದ ಭವಿಷ್ಯ ಅಡಗಿದೆ ಎಂದು ಹೇಳಿದರು. ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ವಿದ್ಯಾರ್ಥಿಗಳು ಗುರಿಯನ್ನು ಮುಂದಿಟ್ಟು ಅದನ್ನು ತಲುಪಲು ನಿರಂತರ ಶ್ರಮ, ಸತತ ಅಧ್ಯಯನ ಹಾಗೂ ಏಕಾಗ್ರತೆ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಸಾಧಕರು ಮಾದರಿಯಾಗಬೇಕು. ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ. ಯಾವುದೇ ಒತ್ತಡ, ದುಗುಡ ಬೇಡ. ಪ್ರತಿ ದಿನದ ಓದನ್ನು ಮನನ ಮಾಡಿ.
ಪೋಷಕರಿಗೆ ಹೊರೆಯಾಗದೇ ಅವರ ನಿರೀಕ್ಷೆಗಳನ್ನು ಈಡೇರಿಸಿ ಎಂದು ಅನಂತಶಯನ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಥೆ, ಕವನ ಬರೆಯುವ ಹವ್ಯಾಸ ರೂಢಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿದ ಅನಂತಶಯನ, ಅಂತಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಉತ್ತೇಜಿಸಿದರು. ಕೂಡಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಸಾಧನೆಯ ದಾಪುಗಾಲಿಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರೋಗ್ಯವಂತಾಗಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಾಲಾ ಪ್ರಾಂಶುಪಾಲ ಕೆ.ಪ್ರಕಾಶ್ ಶಾಲಾ ಸಾಧನೆಯ ವಾರ್ಷಿಕ ವರದಿ ವಾಚಿಸಿದರು. ಕೂಡಿಗೆಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್.ಎ.ಯೋಗೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಹೆಬ್ಬಾಲೆ ಗ್ರಾಪಂ ಅಧ್ಯಕ್ಷ ಅರುಣಕುಮಾರಿ, ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾಪ್ರಕಾಶ್, ಕೂಡುಮಂಗಳೂರು ಗ್ರಾಪಂ ಸದಸ್ಯೆ ಇಂದಿರಾ ರಮೇಶ್, ಶಾಲಾ ಪೋಷಕ ಸಮಿತಿಯ ಗಂಗಾಧರ್, ಮಂಜುನಾಥ್, ರುಬೀನಾ ಹಾಜರಿದ್ದರು.