ಮಡಿಕೇರಿ ಜ.11 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ.3 ರಿಂದ ಕೊಡವ ಕ್ರಿಕೆಟ್ ಲೆದರ್‍ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯು ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಫೌಂಡೇಶನ್‍ನ ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡ್ಡಿಂಗ್ ಅರ್ಜಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಟಿ-20 ಮಾದರಿಯ ಪಂದ್ಯಾವಳಿ ನಡೆಯಲಿದ್ದು, ಸೀಸನ್-1 ರ ಪ್ರಾಂಚೈಸಿಗಳು ಮುಂದುವರೆಯಲಿದ್ದಾರೆ. ಇವರೊಂದಿಗೆ ಮತ್ತಷ್ಟು ಪ್ರಾಂಚೈಸಿಗಳು ಪಾಲ್ಗೊಳ್ಳವ ನಿರೀಕ್ಷೆ ಇದ್ದು, ಆಸಕ್ತ ಆಟಗಾರರ ಬಿಡ್ಡಿಂಗ್ ಅರ್ಜಿ ನಮೂನೆಯನ್ನು ಪಡೆದು ಫೆ.28ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದ ಪ್ರತಿಭೆಗಳನ್ನು ಮುಂದೆ ತರುವ ಗುರಿ ಹೊಂದಿದ್ದೇವೆ. ಸೀಸನ್-2ರ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಫೌಂಡೇಶನ್‍ನ ಉಪಾಧ್ಯಕ್ಷ ಪಾಲಚಂಡ ಜಗನ್ ಮಾತನಾಡಿ, ಈಗಾಗಲೇ ಕ್ರೀಡಾ ಆಸಕ್ತರು ಮುಂದೆ ಬಂದಿದ್ದು, 200 ಕ್ರೀಡಾಪಟುಗಳು ಆಡಲು ಮುಂದಿದ್ದಾರೆ. ಕ್ಯಾಶ್ ಬಿಡ್ಡಿಂಗ್ ಮುಖಾಂತರ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯಲ್ಲಿ ಕೊಡಗಿನ ಯುವ ಪ್ರತಿಭೆಗಳಿಗೆ ಸುಸಜ್ಜಿತವಾದ ಕ್ರಿಕೆಟ್ ಆಟದ ಮೈದಾನವಿದ್ದು, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಕೂರ್ಗ್ ಕ್ರಿಕೆಟ್ ಸಂಸ್ಥೆ ಸಹಕಾರ ನೀಡಿದೆ ಎಂದು ತಿಳಿಸಿದರು. ಫೌಂಡೇಶನ್‍ನ ಖಜಾಂಚಿ ಕೀತಿಯಂಡ ಗಣಪತಿ ಮಾತನಾಡಿ, ಇಂದು ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ದೂರವಿರಲು ಕ್ರೀಡೆ ಸಹಕಾರಿಯಾಗಿದೆ. ಅಲ್ಲದೇ, ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಫೌಂಡೇಶನ್‍ನ ಸಲಹೆಗಾರರಾದ ಅಣ್ಣಳಮಾಡ ರಾಯ್ ಚಿಣ್ಣಪ್ಪ ಮಾತನಾಡಿ, ಇಂದು ಲೆದರ್‍ಬಾಲ್ ಕ್ರಿಕೆಟ್‍ಗಿಂತ ಟೆನ್ನಿಸ್ ಬಾಲ್ ಕ್ರಿಕೆಟ್ ಹೆಚ್ಚಾಗಿ ನಡೆಯುತ್ತಿದೆ. ಪರಿಣಾಮ ಲೆದರ್‍ಬಾಲ್ ಆಟಗಾರರು ವಂಚಿತರಾಗುತ್ತಿದ್ದಾರೆ. ಜತೆಗೆ ಪ್ರತಿಭೆಗಳು ಟೆನ್ನಿಸ್ ಬಾಲ್‍ಗೆ ಸೀಮಿತವಾಗುತ್ತಿದೆ. ಆಟಗಾರರು ಲೆದರ್‍ಬಾಲ್‍ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‍ನ ಕಾರ್ಯದರ್ಶಿ ಮಡ್ಲಂಡ ದರ್ಶನ್, ಸಂಚಾಲಕರಾದ ಚಂಡೀರ ರಚನ್ ಉಪಸ್ಥಿತರಿದ್ದರು.