ಮಡಿಕೇರಿ NEWS DESK ಜ.14 : ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದ ಕೂಪಾಡಿ ಹಾಡಿ ವ್ಯಾಪ್ತಿಯಲ್ಲಿ ನಡೆದಿದೆ. ಹಾಡಿಯ ನಿವಾಸಿ ಜೇನುಕುರುಬರ ತಮ್ಮು (64) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಅವಿವಾಹಿತರಾಗಿರುವ ಇವರು ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಭಾನುವಾರ ಎಂದಿನಂತೆ ಕುರಿ ಮೇಯಿಸಲೆಂದು ಹೋದವರು ಮರಳಿ ಹಾಡಿಗೆ ಬಂದಿರಲಿಲ್ಲ. ಸುತ್ತಮುತ್ತಲೆಲ್ಲ ಹುಡುಕಾಟ ನಡೆಸಿದರೂ ತಮ್ಮು ಅವರ ಸುಳಿವು ದೊರೆತ್ತಿರಲಿಲ್ಲ. ಇಂದು ಕೂಪಾಡಿ ಹಾಡಿಯಿಂದ ಸ್ವಲ್ಪ ದೂರದ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಕಾಡಾನೆ ದಾಳಿಯಿಂದ ಆದ ಸಾವು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಂಜೆ ಸ್ಥಳ ಪರಿಶೀಲನೆ ನಡೆಸಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.