ಮಡಿಕೇರಿ ಜ.16 NEWS DESK : ಬೆಳಗಾವಿ ಜಿಲ್ಲೆಯ ಅಜೂರ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ಕೃಪಾ ದೇವರಾಜ್ ಅವರ ಮರ್ಮರ ಕಥಾ ಸಂಕಲನ ಆಯ್ಕೆಯಾಗಿದೆ. ರಾಜ್ಯದ 8 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೃಪಾ ದೇವರಾಜ್ ಕೂಡಾ ಒಬ್ಬರಾಗಿದ್ದು, ಜ.26 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂ.ಕಾಂ ಪದವಿಯ ನಂತರ ಮಡಿಕೇರಿಯ ಖಾಸಗಿ ಕಂಪನಿಯ ಉದ್ಯೋಗಿ ಆಗಿರುವ ಕೃಪ ದೇವರಾಜ್ ಕಥಾಸಂಕಲನ, ಕವನ ಸಂಕಲನ, ಲೇಖನಗಳು ಇತ್ಯಾದಿ ಕನ್ನಡ ಸಾಹಿತ್ಯದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಲಲಿತ ಪ್ರಬಂಧ ಚುಟುಕುಗಳು ಪ್ರಕಟವಾಗಿರುವುದರ ಜೊತೆಗೆ ಭಾವದ ಕದ ತಟ್ಟಿ(ಕವನ ಸಂಕಲನ), ಮರ್ಮರ(ಕಥಾ ಸಂಕಲನ), ಚೌಚೌ ಬಾತ್(ಲಲಿತ ಪ್ರಬಂಧಗಳು), ಕಾರ್ಪಣ್ಯದ ಹೂವು (ಕವನ ಸಂಕಲನ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃಪಾ ದೇವರಾಜ್ ಮಡಿಕೇರಿ ತಾಲ್ಲೂಕು ಕಚೇರಿಯ ಶಿರಸ್ತೆದಾರ ಪಿ.ಎಲ್.ದೇವರಾಜ್ ಅವರ ಪತ್ನಿ.