ಮಡಿಕೇರಿ ಜ.16 NEWS DESK : ಅರೆಭಾಷಿಕ ಗೌಡ ಜನಾಂಗವನ್ನು ತೇಜೋವಧೆ ಮಾಡಿದವರ ವಿರುದ್ಧ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ವಿವಿಧ ಗೌಡ ಸಂಘಟನೆಗಳಿಂದ ಜ.20 ರಂದು ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಮಾತನಾಡಿ ನಗರದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಯಾವುದೇ ಘೋಷಣೆಗಳನ್ನು ಕೂಗದೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಪ್ರಚೋದನೆಯ ಹೇಳಿಕೆಗಳನ್ನು ನೀಡಿ ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಜನಾಂಗದವರು ಕಳೆದ ಅನೇಕ ವರ್ಷಗಳಿಂದ ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಪ್ರಮುಖ ಜನಾಂಗಗಳಾದ ಅರೆಭಾಷಿಕ ಗೌಡ ಹಾಗೂ ಕೊಡವ ಜನಾಂಗದ ಮಂದಿ ಅತ್ಯಂತ ಉತ್ತಮ ಸಂಬಂಧ ಹೊಂದಿದ್ದಾರೆ. ವಾಣಿಜ್ಯ ವ್ಯವಹಾರಗಳಲ್ಲಿ ಸಹಕಾರಿಯಾಗಿ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹಳಷ್ಟು ಸ್ನೇಹ ಪೂರಕವಾಗಿದ್ದಾರೆ. ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಜಾತಿ, ಜನಾಂಗದ ಬೇಧ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ದೇವಸ್ಥಾನದ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಮೂಡಿರುವ ಭಿನ್ನಾಭಿಪ್ರಾಯ ಒಂದು ಊರಿಗೆ ಸಂಬಂಧಿಸಿದ ವಿಚಾರವಾಗಿದೆ. ಇದನ್ನು ಕಟ್ಟೆಮಾಡು ಗ್ರಾಮದವರೇ ಇತ್ಯರ್ಥ ಮಾಡಿಕೊಳ್ಳಬಹುದಾಗಿತ್ತು, ಅಲ್ಲದೆ ಎಲ್ಲಾ ಸನ್ನಿವೇಶಗಳನ್ನು ಸ್ಥಳೀಯರೇ ಸರಿಪಡಿಸುವ ಅವಕಾಶಗಳಿತ್ತು. ಆದರೆ ಈ ಭಿನ್ನಾಭಿಪ್ರಾಯದ ಲಾಭವನ್ನು ಪಡೆಯಲೆಂದು ಸಂಘಟನೆಯೊಂದರ ಅಧ್ಯಕ್ಷರು ವೀಡಿಯೋ ಕ್ಲಿಪ್ ಮಾಡಿ ಅರೆಭಾಷಿಕ ಗೌಡ ಜನಾಂಗವನ್ನು ನಿಂದಿಸಿ ಅಶಾಂತಿಗೆ ಪ್ರಚೋದನೆ ನೀಡಿದ್ದಾರೆ. ಜನಾಂಗದ ನಿಂದನೆ, ಅಪಮಾನ, ಕಪೋಲ ಕಲ್ಪಿತ ಇತಿಹಾಸ ಸೃಷ್ಟಿಸಿ ಪ್ರಚೋದನೆ ನೀಡಿದ ಆರೋಪದಡಿ ಅವರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರಿಗೂ ದೂರು ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಅವರ ಅನುಯಾಯಿಗಳು ಪೊನ್ನಂಪೇಟೆಯಲ್ಲಿ ಮತ್ತೆ ಗೌಡ ಜನಾಂಗವನ್ನು ತೇಜೋವಧೆ ಮಾಡಿದ್ದಾರೆ.
ಈ ಕುರಿತು ನಾವುಗಳು ಜ.9 ರಂದು ದೂರು ನೀಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘಟನೆಯ ಅಧ್ಯಕ್ಷರ ವಿರುದ್ಧ ಪೊಲೀಸ್ ಇಲಾಖೆಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರೂ ಇಲ್ಲಿಯವರೆಗೆ ದಸ್ತಗಿರಿ ಮಾಡಿಲ್ಲ. ಇದಕ್ಕೆ ಪ್ರಭಾವಿ ವ್ಯಕ್ತಿಗಳ ಕೈವಾಡವೇ ಕಾರಣವಿರಬಹುದು ಎನ್ನುವ ಅನುಮಾನ ಮೂಡುತ್ತಿದೆ ಎಂದು ರಿಶಿತ್ ಮಾದಯ್ಯ ಆರೋಪಿಸಿದರು. 2016 ರಲ್ಲಿ ಹೋರಾಟಗಾರರು ಸಂಘಟನೆಯನ್ನು ನಿಷೇಧಿಸಬೇಕು ಎಂದು ಕೊಡಗು ಸೌಹಾರ್ದ ವೇದಿಕೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಹಲವು ಸಂಘಟನೆಗಳು ಮತ್ತು ಕೊಡವ ಭಾಷಿಕ ಜನಾಂಗದವರು ಹಲವು ಬಾರಿ ದೂರು ನೀಡಿದ್ದರೂ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ಆಚರಣೆಗಳ ದಿನಗಳನ್ನು ಕರಾಳ ದಿನವನ್ನಾಗಿ ಆಚರಿಸುವ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಶಾಂತಿ ಕದಡುವ ಪ್ರಯತ್ನ ಹೆಚ್ಚುತ್ತಿದೆ ಎಂದು ಆರೋಪಿಸಿದರು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ತಪ್ಪಿದಲ್ಲಿ ಪ್ರಚೋದನಾಕಾರಿ ಹೇಳಿಕೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ ಎಂದು ಅಭಿಪ್ರಾಯಪಟ್ಟರು. ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ ಕಟ್ಟೆಮಾಡು ದೇವಾಲಯದ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಶಾಂತಿಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದಕ್ಕೆ ಬೆಲೆ ನೀಡದ ಕೆಲವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಒಕ್ಕಲಿಗ ಗೌಡ ಮತ್ತು ಅರೆಭಾಷೆ ಗೌಡರ ನಡುವೆ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪೊನ್ನಂಪೇಟೆಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕುಶಾಲನಗರ ಗೌಡ ಯುವಕ ಸಂಘದ ನಿರ್ದೇಶಕ ಪೆರುಬಾಯಿ ನವೀನ್, ಕೊಡಗು ಗೌಡ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಳಿಯಪ್ಪ ಹಾಗೂ ನಿದೇಶಕರಾದ ಕರ್ಣಯ್ಯನ ಗುಲಾಬಿ ಉಪಸ್ಥಿತರಿದ್ದರು.