ಮಡಿಕೇರಿ ಜ.16 NEWS DESK : ಒಂಟಿ ನಳಿಕೆ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆಯಲ್ಲಿರುವ ಮದ್ಯದ ಅಂಗಡಿ ಮಾಲೀಕ ಪೊನ್ನಚೆಟ್ಟಿರ ಕೆ.ಮಿತ್ರ ಚಂಗಪ್ಪ(49) ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪೊನ್ನಚೆಟ್ಟಿರ ಕೆ.ಮಿತ್ರ ಚಂಗಪ್ಪ ಅವರು ಎಂದಿನಂತೆ ಬುಧವಾರ ರಾತ್ರಿ ಮದ್ಯದ ಅಂಗಡಿ ಬಂದ್ ಮಾಡಿ 12.30 ಗಂಟೆ ಸುಮಾರಿಗೆ ಲೋಡ್ ಆಗಿದ್ದ ತಮ್ಮ ಬಂದೂಕಿನೊಂದಿಗೆ ಮನೆಗೆ ಹೊರಟಿದ್ದಾರೆ. ಈ ವೇಳೆ ಹಾಲಿನ ವಾಹನ ಅಲ್ಲಿಗೆ ಬಂದಿದ್ದು, ಮಿತ್ರ ಚಂಗಪ್ಪ ಅವರು ತಮ್ಮ ಬಂದೂಕನ್ನು ಸ್ಕೂಟಿಯಲ್ಲಿಟ್ಟು ಹಾಲಿನ ಪ್ಯಾಕೇಟ್ ಪಡೆದುಕೊಂಡಿದ್ದಾರೆ. ನಂತರ ದ್ವಿಚಕ್ರ ವಾಹನದ ಬಳಿ ಬಂದು ಸೀಟು ತೆಗೆದು ಹಾಲಿನ ಪ್ಯಾಕೇಟ್‍ಗಳನ್ನು ಡಿಕ್ಕಿಯಲ್ಲಿ ಇಡುವ ಸಂದರ್ಭ ಸ್ಕೂಟಿಯ ಮುಂಭಾಗದಲ್ಲಿ ನೇರವಾಗಿ ಇಟ್ಟಿದ್ದ ಒಂಟಿ ನಳಿಕೆ ಬಂದೂಕಿನಿಂದ ಏಕಾಏಕಿ ಗುಂಡು ಸಿಡಿದಿದೆ. ಈ ಸಂದರ್ಭ ಗಾಯಗೊಂಡ ಮಿತ್ರ ಚಂಗಪ್ಪ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪೊಲೀಸರು ಘಟನಾ ಸ್ಥಳದ ದೃಶ್ಯಗಳನ್ನು ಸಿ.ಸಿ ಕ್ಯಾಮರಾದ ಮೂಲಕ ಪರಿಶೀಲನೆ ನಡೆಸಿದರು. ಈ ವೇಳೆ ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಗುಂಡು ಸಿಡಿದು ಮಿತ್ರ ಚಂಗಪ್ಪ ಅವರು ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.