
ಮಡಿಕೇರಿ ಜ.17 NEWS DESK : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಉತ್ತಮ ಸಾಧನೆ ಮಾಡಿರುವ ರಾಜ್ಯಮಟ್ಟದ ತಾಲ್ಲೂಕು ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯ್ಕೆಯಾಗಿದೆ. ರಾಜ್ಯ ಸಂಘ ಮೂಲಕ ನೀಡಲಾಗುವ ಉತ್ತಮ ಸಾಧನೆ ಮಾಡಿರುವ ತಾಲ್ಲೂಕು ಹಾಗೂ ಜಿಲ್ಲಾ ಸಂಘಗಳಿಗೆ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು, ಈ ತಿಂಗಳ 18 ಮತ್ತು 19ರಂದು ತುಮಕೂರಿನಲ್ಲಿ ನಡೆಯಲಿರುವ 39ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತು ರಾಜ್ಯಉಪಾಧ್ಯಕ್ಷರು ಹಾಗೂ ಸಂಘದ ಜಿಲ್ಲಾ ಉಸ್ತುವಾರಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಅತ್ಯುತ್ತಮ ಸಾಧನೆಗೈದ ಜಿಲ್ಲೆಗಳಾದ ಉಡುಪಿ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂಘಗಳು ಪ್ರಶಸ್ತಿಗೆ ಭಾಜನವಾಗಿದೆ. ಉತ್ತಮ ಸಾಧನೆಗೈದ ತಾಲೂಕು ಸಂಘಗಳಾದ ಜಿಲ್ಲೆಯ ಕುಶಾಲನಗರ ಸೇರಿದಂತೆ ನಾಗಮಂಗಲ, ಸೇಡಂ ಮತ್ತು ಜಗಳೂರು ಪತ್ರಕರ್ತರ ಸಂಘಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಕುಶಾಲನಗರ ತಾಲೂಕು ಸಂಘ ಸ್ಥಾಪನೆಯಾಗಿ ಮೂರು ವರ್ಷಗಳು ಕಳೆದಿದ್ದು, 2024 ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯ ತನಕ ಸಂಘದ ಆಶ್ರಯದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ 60ಕ್ಕೂ ಅಧಿಕ ಚಟುವಟಿಕೆಗಳನ್ನು ನಡೆಸಿದ್ದು, ಈ ನಡುವೆ ಹೋಬಳಿ ಸಂಘದ ಬೆಳ್ಳಿ ಹಬ್ಬವನ್ನು ಕೂಡ ಆಚರಿಸಿತ್ತು.









