ಮಡಿಕೇರಿ NEWS DESK ಜ.17 : ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಶಾಸಕರ ಮಧ್ಯಸ್ಥಿಕೆಯಲ್ಲಿ ಸಧ್ಯದಲ್ಲಿಯೇ ಸೌಹಾರ್ದಯುತ ಪರಿಹಾರ ದೊರೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲಾಧಿಕಾರಿಗಳು ಫೆ.10 ರವರೆಗೆ ಗೊಂದಲ ನಿವಾರಣೆಗೆ ಕಾಲಾವಕಾಶ ನೀಡಿದ್ದಾರೆ. ಇದಕ್ಕೂ ಮೊದಲು ಅಥವಾ ನಂತರ ಎಲ್ಲಾ ಸಮುದಾಯಗಳ ನಾಯಕರುಗಳನ್ನು ಒಗ್ಗೂಡಿಸಿ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರುಗಳು ಮುಂದಾಗಲಿದ್ದಾರೆ. ಈಗಾಗಲೇ ವಿವಿಧ ಸಂಘಟನೆಗಳು ಶಾಸಕರುಗಳನ್ನು ಭೇಟಿಯಾಗಿ ಭಿನ್ನಾಭಿಪ್ರಾಯ ಶಮನಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದರು. ಇದೊಂದು ಸೂಕ್ಷ್ಮ ವಿಚಾರವಾಗಿರುವ ಕಾರಣ ಜಿಲ್ಲಾಡಳಿತದ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಶಾಂತಿಯುತ ಪರಿಹಾರ ದೊರೆಯಬೇಕು ಎನ್ನುವ ನಿರೀಕ್ಷೆ ನಮ್ಮದಾಗಿತ್ತು. ಸಧ್ಯದಲ್ಲೇ ಶಾಸಕರುಗಳು ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡು ಉತ್ತಮ ರೀತಿಯ ಪರಿಹಾರ ದೊರೆಯುವಂತೆ ನೋಡಿಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರು ಶಾಂತಿ ಮತ್ತು ಒಗ್ಗಟ್ಟಿನಿಂದ ಜೀವನ ಸಾಗಿಸಬೇಕು ಎನ್ನುವ ಇಚ್ಛೆ ನಮ್ಮದು ಎಂದು ಧರ್ಮಜ ಉತ್ತಪ್ಪ ತಿಳಿಸಿದರು.