ಸೋಮವಾರಪೇಟೆ NEWS DESK ಜ.17 : ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕತ್ತರಿಸಿದ ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನಿಗೆ ವಿಧಿಸುವ ಶಿಕ್ಷೆ ಕಟುಕರಿಗೆ ಪಾಠವಾಗಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಸುವಿನ ಕೆಚ್ಚಲು ಕತ್ತರಿಸಿರುವುದು ಹೇಯ ಕೃತ್ಯವಾಗಿದೆ ಮತ್ತು ಆರೋಪಿಯ ಕ್ರೌರ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ದೇಶದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನವಿದೆ, ಹಸುಗಳನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ ಮತ್ತು ಪೂಜಿಸುತ್ತೇವೆ. ಕೃಷಿ ಕ್ಷೇತ್ರದಲ್ಲಿ ಗೋವುಗಳು ರೈತರ ಬೆನ್ನೆಲುಬಾಗಿವೆ, ಸರ್ವೋಪಕಾರಿಯಾಗಿರುವ ಗೋವಿನ ಮೇಲೆ ಪೈಶಾಚಿಕ ಕೃತ್ಯ ನಡೆದಿರುವುದು ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಈ ರೀತಿಯ ಕ್ರೂರತ್ವವನ್ನು ನಿಯಂತ್ರಿಸಲು ಸಾಧ್ಯ. ಹಸುಗಳ ಮಾಲೀಕರಿಗೆ ಹೊಸ ಹಸುಗಳನ್ನು ಕೊಡಿಸಿದಾಕ್ಷಣ ಕೆಚ್ಚಲು ಕಳೆದುಕೊಂಡ ಹಸುವಿನ ನೋವು ಶಮನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.