ಮಡಿಕೇರಿ ಜ.17 NEWS DESK : ಶತಮಾನದ ಹಿಂದೆ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನವನ್ನು ಸ್ಮರಣೀಯಗೊಳಿಸಲು ಕರ್ನಾಟಕದ ಗಡಿ ಜಿಲ್ಲೆ, ಬೆಳಗಾವಿಯಲ್ಲಿ ಜ.21 ರಂದು ಬೃಹತ್ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶದಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಪ್ರಮುಖರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924 ರಂದು ನಡೆದ ಕಾಂಗ್ರೆಸ್ ಅಧಿವೇಶನವು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಈ ಅಧಿವೇಶನಕ್ಕೆ ನೂರು ವರ್ಷ ತುಂಬಿರುವ ಹಿನ್ನೆಲೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಅದ್ದೂರಿಯಾಗಿ ನಡೆಯಲಿದೆ ಎಂದರು. ಕೊಡಗು ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಘಟಕಗಳ ಪ್ರಮುಖರು ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
::: ದ್ವೇಷ ಹುಟ್ಟಿಸಬೇಡಿ :::
ಕಾಂಗ್ರೆಸ್ ಸರಕಾರ ಸಮರ್ಥ ಆಡಳಿತವನ್ನು ನೀಡುತ್ತಿದ್ದು, ರಾಜ್ಯ ಮತ್ತು ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವಿದೆ. ಆದರೆ ಬಿಜೆಪಿ ವಿನಾಕಾರಣ ಪ್ರತಿಭಟನೆಗಳನ್ನು ಮಾಡುವ ಮೂಲಕ ಜನರ ಭಾವನೆಗಳನ್ನು ಕೆಣಕುತ್ತಿದೆ, ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಧರ್ಮಜ ಉತ್ತಪ್ಪ ಆರೋಪಿಸಿದರು. ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದೆ. ಆದರೂ ಬಿಜೆಪಿ ಮಂದಿ ವಿರಾಜಪೇಟೆ ಶಾಸಕರ ಮನೆ ಎದುರು ಪ್ರತಿಭಟನೆ ಮಾಡಲು ಪ್ರಯತ್ನಿಸಿ ಕ್ಷುಲ್ಲಕ ರಾಜಕೀಯ ಪ್ರದರ್ಶಿಸಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಪ್ರತಿಭಟನೆಗಳನ್ನು ಮಾಡದೆ ಜನರ ಭಾವನೆಗಳನ್ನು ಕೆಣಕಿ ದ್ವೇಷ ಹುಟ್ಟಿಸುವ ಪ್ರತಿಭಟನೆಗಳನ್ನು ಮಾಡುತ್ತಿದ್ದು, ಈ ಪ್ರವೃತ್ತಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ ಸುಮಾರು 2ಲಕ್ಷ ಮಂದಿ ಪಾಲ್ಗೊಳ್ಳುವ ಬೆಳಗಾವಿ ಸಮಾವೇಶದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಬಹುದು ಎಂದರು. ಸಮಾವೇಶದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ ಹಾಗೂ ಸಂವಿಧಾನದ ಮೂಲಕ ಅಮೋಘ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆಯೊಂದಿಗೆ ಸಂವಿಧಾನದ ಆಶಯಗಳ ಕುರಿತು ವಿಷಯ ಪ್ರಸ್ತಾಪವಾಗಲಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
::: ಗಾಂಧಿ ಭವನ :::
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗಾಂಧಿ ಭವನದ ಮೊದಲ ಹಂತದ ನಿರ್ಮಾಣ ಕಾರ್ಯ ರೂ.50 ಲಕ್ಷಗಳಲ್ಲಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ 69 ಲಕ್ಷ ರೂ.ಗಳ ಅಗತ್ಯವಿದ್ದು, ಮುಖ್ಯಮಂತ್ರಿಗಳ ಭೇಟಿಯ ಸಂದರ್ಭ ಅನುದಾನ ಬಿಡುಗಡೆಯ ಭರವಸೆ ದೊರೆತ್ತಿದೆ. ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಟಿ.ಪಿ.ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಉಪಸ್ಥಿತರಿದ್ದರು.