ವಿರಾಜಪೇಟೆ ಜ.17 NEWS DESK : ನಗರದ ಪ್ರಮುಖ ರಸ್ತೆಗಳು ಹದಗೆಟ್ಟಿದೆಯಾದರು, ಪುರಸಭೆ ಈ ಬಗ್ಗೆ ಗಮನ ಹರಿಸಿ ಅಗತ್ಯ ದುರಸ್ತಿ ಕಾರ್ಯಗಳನ್ನು ನಡೆಸುವುದರ ಬದಲಾಗಿ ನಿರ್ಲಕ್ಷ್ಯ ಧೋರಣೆ ತಳೆದಿದೆಯೆಂದು ವಿರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಪಿ.ಕೆ.ಅಬ್ದುಲ್ ರೆಹಮಾನ್ ಮಾತನಾಡಿ, ನಗರದ ಪ್ರಮುಖ ರಸ್ತೆಗಳು ಮಳೆಯಿಂದಾಗಿ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಬಳಿಕ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇಂದಿನವರೆಗೆ ಗುಂಡಿಮಯ ರಸ್ತೆಯಲ್ಲಿ ತೆರಳುವ ದುಸ್ಥಿತಿ ನಾಗರಿಕರಿಗೆ ಎದುರಾಗಿದೆಯೆಂದು ಟೀಕಿಸಿದರು. ನಗರದ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ರಾತ್ರಿಯ ಅವಧಿಯಲ್ಲಿ ಸಂಚಾರ ಕಷ್ಟಕರವಾಗಿದೆ. ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಪುರಸಭೆ ಯಾವುದೇ ಕ್ರಮ ಜರುಗಿಸಿಲ್ಲವೆಂದು ಆರೋಪಿಸಿದ ರೆಹಮಾನ್, ಕುಡಿಯುವ ನೀರು ಯೋಜನೆಯ ಕಾಮಗಾರಿ ಆರಂಭಿಸಿ ತಿಂಗಳು ಕಳೆದಿದ್ದು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆಂದು ಟೀಕಿಸಿದರು. ಪುರಸಭೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸಮಿತಿ ಮತ್ತು ಸಂಘ ಸಂಸ್ಥೆಯ ವತಿಯಿಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ನಾಗರಿಕ ಸಮಿತಿ ಸಂಚಾಲಕ ಡಾ.ಇ.ರ.ದುರ್ಗಾ ಪ್ರಸಾದ್ ಮಾತನಾಡಿ, ನಗರದ ಮೂಲಭೂತ ಸಮಮಸ್ಯೆಗಳ ಬಗೆಹರಿಕೆಯತ್ತ ಆಸಕ್ತವಾದ ಪುರಸಭೆ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು, ಹೊಟ್ಟೆಗೆ ಹಿಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆಯೆಂದು ಲೇವಡಿ ಮಾಡಿದರು.
ಅತೀ ಶೀಘ್ರವಾಗಿ ರಸ್ತೆ ದುರಸ್ತಿ ಸೇರಿದಂತೆ ನಗರದಲ್ಲಿ ಕಾಡುತ್ತಿರುವ ಇತರ ಸಮಸ್ಯೆಗಳಿಗೆ ಪುರಸಭೆ ಪರಿಹಾರ ಕಾಣಬೇಕು ಎಂದು ಆಗ್ರಹಿಸುತಿದ್ದೇವೆ. ಇದಕ್ಕಾಗಿ ಇಪ್ಪತ್ತು ದಿನದ ಗಡುವು ನೀಡುತಿದ್ದೇವೆ. ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಜನಪರ ಸಮಿತಿಗಳೊಂದಿಗೆ ಸಮಿತಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಾಗರಿಕ ಸಮಿತಿಯ ಸದಸ್ಯರಾದ ಎನ್.ಕೆ.ಶರೀಫ್ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ