ಮಡಿಕೇರಿ ಜ.18 NEWS DESK : ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷರಾಗಿ ಸಂಘಟಕ, ಪತ್ರಕರ್ತ, ಚಿತ್ರನಟ, ಸಾಹಿತಿ ಬೊಳ್ಳಜಿರ ಬಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಾಗುತ್ತಿದೆ. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ.ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಇನ್ನೊರ್ವ ಕರ್ನಾಟಕ ರಾಜ್ಯ ಸಂಚಾಲಕರಾದ ಬಿ.ಶಿವಕುಮಾರ್ ಕೋಲಾರ ಹಾಗೂ ನಿರ್ದೆಶಕರಾದ ಡಾ.ಕೊಳಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಬೊಳ್ಳಜಿರ ಬಿ.ಅಯ್ಯಪ್ಪ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, 20000ಪುಸ್ತಕಗಳುಳ್ಳ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ಯಾತ್ರಾರ್ಥಿಗಳಿಗೆ ”ಉಚಿತ ವಸತಿ ಸೌಕರ್ಯ ” ಪ್ರತಿ ಮನೆಗೊಂದು ಗ್ರಂಥಾಲಯ -ಪುಸ್ತಕವೇ ಸತ್ಯ -ಪುಸ್ತಕವೇ ನಿತ್ಯ ಎಂಬ ನೂತನ ಜನಾಂದೋಲನ ಕಾರ್ಯಕ್ರಮ ಹಾಗೂ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಘಟನೆ, ಸಂಯೋಜನೆಯಲ್ಲಿ ಘಟಕವನ್ನು ವಿಸ್ತರಿಸಿ ಕಾರ್ಯ ಕಾರ್ಯಪ್ರವೃತ್ತರಾಗಬೇಕೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್, ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.