
ಮಡಿಕೇರಿ, NEWS DESK ಅ.1: ನಗರದ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಅಂಗವಾಗಿ “ಓಣಾ ಘೋಷಂ ಓಣಂ ಸಧ್ಯ” ಕಾರ್ಯಕ್ರಮ ಅ.4ರಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ಅ.4ರಂದು ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಪೂಕಳಂ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಗರದ ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ ಓಣಾಘೋಷಂ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಮಲಯಾಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಬಲಿಯ ಸ್ತಬ್ಧಚಿತ್ರ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಇರಲಿವೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸಮುದಾಯದ ಬಾಂಧವರು ಪಾಲ್ಗೊಳ್ಳಲಿರುವ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಸಮಾಪನಗೊಳ್ಳಲಿದೆ.
ಮೆರವಣಿಗೆಯ ಬಳಿಕ ಬೆಳಿಗ್ಗೆ 11 ಗಂಟೆಗೆ ತಿರುವಾದಿರ ನೃತ್ಯ ನಡೆಯಲಿದೆ. ನಂತರದ ಸಭಾ ಕಾರ್ಯಕ್ರಮವನ್ನು ಶ್ರೀ ತೋಂಟದಾರ್ಯ ಮಠ, ಬಸವಪಟ್ಟಣ, ಮುಳ್ಳೂರಿನ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ. ಅನಿಲ್, ಎಡಿಕೇರಿ ಪ್ರಸನ್ನ, ವಿ.ಎಂ. ವಿಜಯ್ ಹಾಗೂ ಕೆ.ವಿ. ಧರ್ಮೇಂದ್ರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಆರ್. ಪ್ರಮೋದ್, ಪ್ರಧಾನ ಕಾರ್ಯದರ್ಶಿ ಇ.ಬಿ. ದಿನೇಶ್ ನಾಯರ್, ಖಜಾಂಜಿ ಎಂ.ಎಸ್. ದಿನೇಶ್ ನಾಯರ್ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ಕೆ. ಮೋಹನ್ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಓಣಂ ಸಧ್ಯ ಆಯೋಜಿಸಲಾಗಿದ್ದು, ಮಧ್ಯಾಹ್ನ 1.30ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೇರಳದ ಸ್ಯಾನ್ ಕ್ರಿಯೇಷನ್ಸ್ ವತಿಯಿಂದ ಕಾಮಿಡಿ ಶೋ ಕೂಡ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಲಯಾಳಿ ಸಂಘದ ಉಪಾಧ್ಯಕ್ಷ ಟಿ.ಆರ್. ಪ್ರಮೋದ್, ಖಜಾಂಜಿ ಎಂ.ಎಸ್. ದಿನೇಶ್ ನಾಯರ್, ಸಂಘಟನಾ ಕಾರ್ಯದರ್ಶಿ ಕೆ.ಕೆ. ಮೋಹನ್, ಸಹ ಕಾರ್ಯದರ್ಶಿ ಎಸ್. ಸಂದೀಪ್ ಹಾಗೂ ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ. ಅನಿಲ್ ಉಪಸ್ಥಿತರಿದ್ದರು.









