ಮಡಿಕೇರಿ NEWS DESK ಜ.18 : ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಹಾಗೂ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಅವರು ಶನಿವಾರ ಮಡಿಕೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆ ವೈಯುಕ್ತಿಕವಾಗಿದ್ದು, ಅದಕ್ಕೆ ನಮ್ಮ ಸಹಮತ ಇಲ್ಲ. ನಾವು ಹೋರಾಟಕ್ಕೆ ಬದ್ಧರಾಗಿದ್ದು, ಇವರಿಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಸಂಚಾಲಕ ಶಾಂತೆಯಂಡ ನಿರನ್ ನಾಚಪ್ಪ ಒತ್ತಾಯಿಸಿದ್ದಾರೆ. ಸೋಮವಾರ ಬೃಹತ್ ಜಾಥಾ ನಡೆಸಲು ವಿವಿಧ ಸಂಘಟನೆ, ಸಮಾಜ ಮತ್ತು ಜನಾಂಗ ಮುಖಂಡರೊಂದಿಗೆ ಮಾತುಕತೆ ನಡೆಯುತ್ತಿದ್ದು, ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮಡಿಕೇರಿಯಲ್ಲಿ ನಡೆಸಿರುವ ಪತ್ರಿಕಾಗೋಷ್ಠಿಗೆ ನಮ್ಮನ್ನು ಕರೆದ ವಿಚಾರವೇ ಬೇರೆ, ಅಲ್ಲಿ ಅಖಿಲ ಕೊಡವ ಸಮಾಜ ನಡೆದುಕೊಂಡದ್ದೇ ಬೇರೆಯಾಗಿದೆ. ಕಟ್ಟೆಮಾಡು ಪ್ರಕರಣದ ಹಲ್ಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದನ್ನು ವಿರೋಧಿಸಿ ಪ್ರತಿಭಟನೆ ಆಯೋಜಿಸುತ್ತಿರುವ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿರುವುದಾಗಿ ಹೇಳಿದ್ದ ಅಖಿಲ ಕೊಡವ ಸಮಾಜದ ಪ್ರಮುಖರು ಸಂಬಂಧವೇ ಇಲ್ಲದ ವಿಚಾರವನ್ನು ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡವ ಸಂಸ್ಕೃತಿಯನ್ನು ಇತರರೊಂದಿಗೆ ಹೋಲಿಸಿ ನೀಡಿದ ಹೇಳಿಕೆಯನ್ನು ನಾವು ಒಪ್ಪಲು ಸಾದ್ಯವೇ ಇಲ್ಲ. ಕೊಡವ ಸಂಸ್ಕೃತಿ ಇಡೀ ಪ್ರಪಂಚದಲ್ಲೆ ವಿಭಿನ್ನವಾಗಿದ್ದು, ನಮ್ಮ ಪೂರ್ವಜರು ಈ ಮಣ್ಣಿನ ಮೌಲ್ಯಕ್ಕನುಗುಣವಾಗಿ ಆಚರಿಸಿಕೊಂಡು ಬಂದ ಸಂಪ್ರದಾಯವಾಗಿದೆ. ಜನಾಂಗದ ಮಾತೃ ಸಂಸ್ಥೆ ಎಂದು ಬಿಂಬಿಸಿಕೊಳ್ಳುವ ಅಖಿಲ ಕೊಡವ ಸಮಾಜ ಇಂದು ತನ್ನ ಸಾಂಸ್ಕೃತಿಕ ಹಿರಿಮೆಯನ್ನ ಮತ್ಯಾರೊಂದಿಗೋ ಹೋಲಿಕೆ ಮಾಡಿಕೊಂಡು ಜನಾಂಗಕ್ಕೆ ಅವಮಾನ ಮಾಡಿದ್ದು, ತಕ್ಷಣ ಜನಾಂಗದ ಕ್ಷಮೆ ಕೇಳಬೇಕು, ಇಲ್ಲವೇ ಈ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಗೂ ಮೊದಲು ಪತ್ರಿಕಾ ಪ್ರಕಟಣೆಯನ್ನು ಕೇಳಿದರೂ ನಮಗೆ ನೀಡದೆ ನಮ್ಮ ಉಪಸ್ಥಿತಿಯಲ್ಲಿ ವೈಯುಕ್ತಿಕ ಹೇಳಿಕೆಯನ್ನು ನೀಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ನಿರನ್ ಹೇಳಿದ್ದಾರೆ. ಇತ್ತೀಚೆಗೆ ವಿರಾಜಪೇಟೆಯಲ್ಲಿ ಎಲ್ಲಾ ಸಂಘಟನೆಗಳ, ಸಮಾಜಗಳು ಮತ್ತು ಭಾಷಿಕ ಜನಾಂಗದ ನಾಯಕರ ಸಭೆಯಲ್ಲಿಯೂ ನಮ್ಮತನವನ್ನು ಬಿಡದೆ ಕಾನೂನು ವ್ಯಾಪ್ತಿಯಲ್ಲಿ ಹೋರಾಡಬೇಕೆಂದು ತೀರ್ಮಾನಿಸಿದ್ದೇವೆ. ಹೋರಾಟದ ನೇತೃತ್ವವನ್ನು ಅಖಿಲ ಕೊಡವ ಸಮಾಜ ಮತ್ತು ಒಕ್ಕೂಟ ಕೊಡವ ಸಮಾಜಕ್ಕೆ ನೀಡಲಾಗಿತ್ತು. ಆದರೆ ಹೋಗಿ ಕಾಲಿಗೆ ಬಿದ್ದು ಸಂಧಾನಕ್ಕೆ ಕರೆಯುವ ಮಟ್ಟಕ್ಕೆ ಇವರು ಇಳಿದಿರುವುದು ನಮ್ಮ ದುರಂತ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇಬ್ಬರ ಹೇಳಿಕೆಯನ್ನು ನೀಡಿದ್ದು, ಇದಕ್ಕೆ ನಮ್ಮ ಸಹಮತ ಇರುವುದಿಲ್ಲ. ನಮ್ಮ ಹೋರಾಟ ಕಾನೂನು ವ್ಯಾಪ್ತಿಯಲ್ಲಿ ಮುಂದುವರೆಯಲಿದ್ದು, ಸಂವಿಧಾನಾತ್ಮಕ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನಿರನ್ ನಾಚಪ್ಪ ತಿಳಿಸಿದ್ದಾರೆ. ಜ.20 ರಂದು ವಿವಿಧ ಸಂಘಟನೆ ಮತ್ತು ಸಮಾಜಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ನಮ್ಮ ಹಕ್ಕನ್ನು ಕಸಿಯಲು ಬಂದವರ ಹಾಗೂ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ಚಿಂತನೆ ನಡೆಸಿದ್ದೇವೆ. ಈ ಕುರಿತು ಮಾತುಕತೆ ನಡೆಸುತಿದ್ದೇವೆ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನ್ಯಾಯ ಮತ್ತು ಜನಾಂಗಕ್ಕಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ ಎಂದು ನಿರನ್ ಸ್ಪಷ್ಟಪಡಿಸಿದ್ದಾರೆ.